×
Ad

ಗದಗ: ಮೂವರು ಹೆಣ್ಮಕ್ಕಳೊಂದಿಗೆ ನದಿಗೆ ಹಾರಿದ ತಾಯಿ; ಇಬ್ಬರು ಮೃತ್ಯು, ಇನ್ನಿಬ್ಬರು ಪಾರು

Update: 2021-09-29 10:24 IST
ಸಾಂದರ್ಭಿಕ ಚಿತ್ರ

ಗದಗ, ಸೆ.29: ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಈ ವೇಳೆ ತಾಯಿ ಮತ್ತು 8 ವರ್ಷದ ಹೆಣ್ಣು ಮಗಳೊಬ್ಬಳು ಮೃತಪಟ್ಟರೆ, ಇನ್ನಿಬ್ಬರು ಮಕ್ಕಳು ಪಾರಾಗಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ಬುಧವಾರ ಮುಂಜಾವ ನಡೆದಿರುವುದು ವರದಿಯಾಗಿದೆ. ಘಟನೆಗೆ ಕೌಟುಂಬಿಕ ಸಮಸ್ಯೆ ಕಾರಣ ಎಂದು ಹೇಳಲಾಗುತ್ತಿದೆ.

ಉಮಾದೇವಿ ಹಾಗೂ ಅವರ 8 ವರ್ಷದ ಮಗಳು ಮೃತಪಟ್ಟವರು. 12 ಮತ್ತು 14 ವರ್ಷದ ಮತ್ತಿಬ್ಬರು ಹೆಣ್ಣುಮಕ್ಕಳು ಬಚಾವಾಗಿದ್ದಾರೆ.

ಉಮಾದೇವಿಯವರ ಪತಿ ಮೂರು ತಿಂಗಳ ಹಿಂದೆ ಕೋವಿಡ್-19 ಸೋಂಕಿಗೊಳಗಾಗಿ ಮೃತಪಟ್ಟಿದ್ದರು. ಈ ದಂಪತಿಗೆ ನಾಲ್ವರು ಹೆಣ್ಣುಮಕ್ಕಳು. ಮೊದಲ ಮಗಳು ಹುಬ್ಬಳ್ಳಿಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ಇನ್ನು ಮೂವರು ಮಕ್ಕಳು ಉಮಾದೇವಿಯ ಜೊತೆಗೇ ಇದ್ದರು.

ಹೆಣ್ಣು ಮಕ್ಕಳು ಮಾತ್ರ ಎಂದು ಬೇಸರ ಹೊಂದಿದ್ದರೆನ್ನಲಾದ ಉಮಾದೇವಿ ಪತಿ ತೀರಿಕೊಂಡ ಬಳಿಕ ಮತ್ತಷ್ಟು ಖಿನ್ನತೆಗೊಳಗಾಗಿದ್ದರೆನ್ನಲಾಗಿದೆ. ಇಂದು ನಸುಕಿನ ಜಾವ ತವರಿಗೆ ಹೋಗೋಣ ಎಂದು ಮೂವರು ಮಕ್ಕಳನ್ನು ಕರೆದುಕೊಂಡು ಹೋಗಿ ನದಿಗೆ ಹಾರಿದ್ದಾರೆ. ಈ ವೇಳೆ ಇಬ್ಬರು ಹೆಣ್ಮಕ್ಕಳು ಪಾರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ರೋಣ ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News