ರಾಯಚೂರು: ಒಂದೇ ಕುಟುಂಬದ ಮೂವರು ಮಹಿಳೆಯರ ಕೊಲೆ
Update: 2021-09-29 12:14 IST
ರಾಯಚೂರು, ಸೆ.29: ಒಂದೇ ಕುಟುಂಬದ ಮೂವರು ಮಹಿಳೆಯರನ್ನು ಕಟ್ಟಿಗೆಯಿಂದ ಹೊಡೆದು ಕೊಲೆಗೈದಿರುವ ಘಟನೆ ರಾಯಚೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಯರಮರಸ್ ಎಂಬಲ್ಲಿ ಮಂಗಳವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ಸಂತೋಷಿ, ಅವರ ಪುತ್ರಿಯರಾದ ವೈಷ್ಣವಿ ಹಾಗೂ ಆರತಿ ಎಂದು ಗುರುತಿಸಲಾಗಿದೆ. ವೈಷ್ಣವಿ ಅವರ ಪತಿ ಸಾಯಿ ಕೊಲೆ ಆರೋಪಿ ಎಂದು ಶಂಕಿಸಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಸಂತೋಷಿಯವರ ಹಿರಿಯ ಪುತ್ರಿ ವೈಷ್ಣವಿಯನ್ನು ಆರು ತಿಂಗಳ ಹಿಂದೆ ಸಾಯಿಗೆ ವಿವಾಹ ಮಾಡಿಕೊಡಲಾಗಿತ್ತು. ಇತ್ತೀಚೆಗೆ ಪತಿ-ಪತ್ನಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇರೀತಿ ಕಳೆದ ರಾತ್ರಿ ಗಂಡ-ಹೆಂಡತಿ ನಡುವೆ ಜಗಳ ನಡೆದು ಆರೋಪಿ ಸಾಯಿ ತನ್ನ ಪತ್ನಿ, ಅತ್ತೆ ಹಾಗು ನಾದಿನಿಯನ್ನು ಕಟ್ಟಿಗೆಯಿಂದ ಹೊಡೆದು ಸಾಯಿಸಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ರಾಯಚೂರು ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.