ಮನೆಯಿಂದ ಹೊರಬಂದ ಬೆನ್ನಲ್ಲೇ ಎಟಿಎಂನಿಂದ ಹಣ ಡ್ರಾ ಮಾಡಿದ್ದ ಗಿರಿರಾಜ್
ಶಿವಮೊಗ್ಗ, ಸೆ.29: ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಗಿರಿರಾಜ್ ನಾಪತ್ತೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಗಿರಿರಾಜ್ ಮನೆಯಿಂದ ಹೊರಬಂದ ಬೆನ್ನಲ್ಲೆ ಬಸ್ ನಿಲ್ದಾಣದ ಬಳಿ ಎಟಿಎಂವೊಂದರಿಂದ 15 ಸಾವಿರ ರೂ. ಡ್ರಾ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಚೇರಿಯ ಕಾರ್ಯದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಾಟ್ಸ್ ಆ್ಯಪ್ ಮೆಸೇಜ್ ಮಾಡಿದ್ದರೆನ್ನಲಾದ ಗಿರಿರಾಜ್ ಎಟಿಎಂನಿಂದ ಹಣ ಡ್ರಾ ಮಾಡಿರುವುದು ಅವರು ಬದುಕಿದ್ದು, ಎಲ್ಲಿಯೋ ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ನಡುವೆ ಗಿರಿರಾಜ್ ಅವರ ಮೊಬೈಲ್ ಟವರ್ ಲೊಕೇಶನ್ ತಮ್ಮಡಿಹಳ್ಳಿಯ ಸಮೀಪ ಕೊನೆಯದಾಗಿ ಟ್ರೇಸ್ ಆಗಿತ್ತು. ಹೀಗಾಗಿ ಎಂ.ಸಿ. ಹಳ್ಳಿ ಚಾನಲ್ ಸುತ್ತಮುತ್ತ ಜಯನಗರ ಹಾಗೂ ಭದ್ರಾವತಿ ಪೊಲೀಸರ ಒಂದು ತಂಡ ಗಿರಿರಾಜ್ಗಾಗಿ ಹುಡುಕಾಟ ನಡೆಸುತ್ತಿದೆ.
ಇನ್ನೊಂದು ತಂಡ ಬಸ್ ನಿಲ್ದಾಣದ ಬಳಿ ಎಟಿಎಂನಿಂದಲ್ಲಿ ಹಣ ಪಡೆದಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದು, ಈ ಸಂಬಂಧ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸುತ್ತಾ, ತನಿಖೆ ಮುಂದುವರಿಸಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ ಖುದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯ ಹಂತಗಳನ್ನು ಗಮನಿಸುತ್ತಿದ್ದಾರೆ.
ಇನ್ನೊಂದೆಡೆ ಗಿರಿರಾಜ್ ಕುಟುಂಬ, ಜಯನಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದೆ.