×
Ad

ಬಿಜೆಪಿಯ ಭಯೋತ್ಪಾದಕ ಪಡೆ ನಡೆಸಿದ ಅನೈತಿಕ ಪೊಲೀಸ್‌ಗಿರಿ ಬಗ್ಗೆ ಏಕೆ ತುಟಿ ಬಿಚ್ಚಿಲ್ಲ: ಸಿಎಂಗೆ ಕಾಂಗ್ರೆಸ್ ಪ್ರಶ್ನೆ

Update: 2021-09-29 13:43 IST

ಬೆಂಗಳೂರು, ಸೆ.29: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನೈತಿಕ ಪೊಲೀಸ್‌ಗಿರಿಯನ್ನು ಸಹಿಸುವುದಿಲ್ಲ ಎಂದಿದ್ದರು. ಆದರೆ ಸುರತ್ಕಲ್‌ನಲ್ಲಿ ರವಿವಾರ ಬಿಜೆಪಿಯ ಭಯೋತ್ಪಾದಕ ಪಡೆ ನಡೆಸಿದ ಅನೈತಿಕ ಪೊಲೀಸ್‌ಗಿರಿಯ ಬಗ್ಗೆ ತುಟಿ ಬಿಚ್ಚದೆ ಆರೋಪಿಗಳಿಗೆ ಸ್ಟೇಶನ್ ಬೇಲ್ ನೀಡಿ ತಕ್ಷಣವೇ ಬಿಟ್ಟು ಕಳಿಸಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದ್ದು, ರಾಜ್ಯವನ್ನು ತಾಲಿಬಾನೀಕರಣ ಮಾಡಲು ಬಿಜೆಪಿ ಮುಂದಾಗಿದೆ ಎಂದು ಟೀಕಿಸಿದೆ.

ರವಿವಾರ ಸಂಜೆ ಸುರತ್ಕಲ್ ಸಮೀಪ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ತಂಡವೊಂದು ಹಲ್ಲೆ ನಡೆಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಸೋಮವಾರ ಪೊಲೀಸರು ಬಂಧಿಸಿದ್ದರೂ, ಅವರಿಗೆ ಠಾಣೆಯಲ್ಲೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿರುವ ನಡುವೆಯೇ ರಾಜ್ಯ ಕಾಂಗ್ರೆಸ್, ಟ್ವೀಟ್ ಮೂಲಕ ರಾಜ್ಯ ಸರಕಾರವನ್ನು ಟೀಕಿಸಿದೆ. 

ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಇತ್ತೀಚೆಗೆ ಸದನದಲ್ಲಿ ಸಿದ್ದರಾಮಯ್ಯ ಅವರ ಪಂಚೆ ಕಳಚಿದ ವಿಚಾರವಾಗಿ ಟೀಕಿಸಿದ ಬಿಜೆಪಿ ವಿರುದ್ಧ ಕಿಡಿಕಾರಿದೆ. ಕಂಡ ಕಂಡಲ್ಲಿ ತಮ್ಮ ಪ್ಯಾಂಟ್ ಕಳಚಿ ಸಿಡಿ ಮಾಡಿಕೊಳ್ಳುವ ರಾಜ್ಯ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಅವರ ಪಂಚೆಯ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಮೊದಲು ತಮ್ಮ ಚಡ್ಡಿಯ ಲಾಡಿ ಭದ್ರಪಡಿಸಿಕೊಳ್ಳಲಿ ಎಂದು ಕಿಚಾಯಿಸಿದೆ.

ಕಾಂಗ್ರೆಸ್ ಟ್ವೀಟ್ ಹೀಗಿದೆ...

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನೈತಿಕ ಪೊಲೀಸ್‌ಗಿರಿಯನ್ನು ಸಹಿಸುವುದಿಲ್ಲ ಎಂದಿದ್ದರು. ಆದರೆ ಸುರತ್ಕಲ್‌ನಲ್ಲಿ ಬಿಜೆಪಿಯ ಭಯೋತ್ಪಾದಕ ಪಡೆ ನಡೆಸಿದ ಅನೈತಿಕ ಪೊಲೀಸ್‌ಗಿರಿಯ ಬಗ್ಗೆ ತುಟಿ ಬಿಚ್ಚದೆ ಆರೋಪಿಗಳಿಗೆ ಸ್ಟೇಶನ್ ಬೇಲ್ ನೀಡಿ ತಕ್ಷಣವೇ ಬಿಟ್ಟು ಕಳಿಸಿದ್ದೇಕೆ? ರಾಜ್ಯವನ್ನು ತಾಲಿಬಾನೀಕರಣ ಮಾಡಲು ಬಿಜೆಪಿ ಮುಂದಾಗಿದೆ.

ಪಂಚೆ ಈ ನೆಲದ ಸಂಸ್ಕೃತಿಯ ಪ್ರತೀಕ, ಶ್ರಮಜೀವಿಗಳ ಸಂಗಾತಿ, ಪಂಚೆ ಕಳಚುವುದು ಎತ್ತಿ ಕಟ್ಟುವುದೂ ಸಹಜ, ಅದೇ ಕರುನಾಡ ಮಣ್ಣಿನ ಮಕ್ಕಳ ಗತ್ತು. ಕಂಡ ಕಂಡಲ್ಲಿ ತಮ್ಮ ಪ್ಯಾಂಟ್ ಕಳಚಿ ಸಿಡಿ ಮಾಡಿಕೊಳ್ಳುವ ರಾಜ್ಯ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಅವರ ಪಂಚೆಯ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಮೊದಲು ತಮ್ಮ ಚಡ್ಡಿಯ ಲಾಡಿ ಭದ್ರಪಡಿಸಿಕೊಳ್ಳಲಿ.

ಸಿದ್ದರಾಮಯ್ಯ ಅವರ ಪಂಚೆ ಆಕಸ್ಮಿಕವಾಗಿ ಕಳಚಿ ಬೀಳುವುದು ಸಹಜ. ಆದರೆ ಬಿಜೆಪಿ ನಾಯಕರು ತಮ್ಮ ಪ್ಯಾಂಟ್‌ನ್ನ ತಾವೇ ಕಳಚುವುದು ಅಸಹ್ಯ. ಕಳಚಿದ ನಂತರ ವೀಡಿಯೋ ಮಾಡಿಕೊಳ್ಳುವುದು, ಸಿಡಿ ಬಿಡುಗಡೆಗೆ ತಡೆಯಾಜ್ಞೆ ತರುವುದು ಪರಮ ಅಸಹ್ಯ. ಮುಂದೆ ನಮ್ಮ ಸರ್ಕಾರದಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಕಳಚಲಾಗದ 'ಪ್ಯಾಂಟ್ ಭಾಗ್ಯ' ನೀಡುವೆವು ಚಿಂತಿಸಬೇಡಿ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News