ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ಉಮೇಶ್ ರೆಡ್ಡಿಗೆ ಗಲ್ಲು ಖಾಯಂ: ಹೈಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು, ಸೆ.29: ವಿಕೃತಕಾಮಿ ಹಾಗೂ ಸರಣಿ ಹಂತಕ ಉಮೇಶ್ ರೆಡ್ಡಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿ ಬುಧವಾರ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
1998ರಲ್ಲಿ ಬೆಂಗಳೂರಿನ ಪೀಣ್ಯಾದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮೇಶ್‌ರೆಡ್ಡಿಗೆ 2006ರಲ್ಲಿ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಲು ಹೈಕೋರ್ಟ್ಗೆ ಉಮೇಶ್ ರೆಡ್ಡಿ ತಮ್ಮ ವಕೀಲ ಬಿ.ಎನ್.ಜಗದೀಶ್ ಮೂಲಕ ಅರ್ಜಿ ಸಲ್ಲಿಸಿದ್ದ.
ಆದರೆ ಇದೀಗ ನ್ಯಾ.ಅರವಿಂದ್ ಕುಮಾರ್ ಹಾಗೂ ನ್ಯಾ.ಪ್ರದೀಪ್ ಸಿಂಗ್ ಯೆರೂರು ಅವರಿದ್ದ ಹೈಕೋರ್ಟ್ ಪೀಠ, ರಾಷ್ಟçಪತಿ ಅವರು ಕ್ಷಮಾದಾನ ಅರ್ಜಿ ಇತ್ಯರ್ಥ ಮಾಡಲು ವಿಳಂಬ ಮಾಡಿಲ್ಲ. 10 ವರ್ಷಗಳ ಕಾಲ ಒಂಟಿಸೆರೆಯಲ್ಲಿಡಲಾಗಿತ್ತು ಎನ್ನಲಾಗದು ಎಂದು ಅಭಿಪ್ರಾಯಪಟ್ಟು, ಸರಣಿ ಹಂತಕನಿಗೆ ಗಲ್ಲು ಶಿಕ್ಷೆ ಖಾಯಂಗೊಳಿಸಿದೆ.
ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಉಮೇಶ್ ರೆಡ್ಡಿ ತಾಯಿ ಸಲ್ಲಿಸಿದ್ದ ಅರ್ಜಿ ಕೂಡ 2013ರಲ್ಲಿ ತಿರಸ್ಕರಿಸಲ್ಪಟ್ಟಿತ್ತು. ಚಿತ್ರದುರ್ಗ ಮೂಲದ ಉಮೇಶ್‌ರೆಡ್ಡಿ ಬೆಂಗಳೂರು ಸೇರಿ ಹಲವೆಡೆ ಸುಮಾರು 20ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆಗೈದು ವಿಕೃತ ಕಾಮಿ ಎಂಬ ಕುಖ್ಯಾತಿಗೆ ಪಾತ್ರನಾಗಿದ್ದ. 1997ರಲ್ಲಿ ಬಳ್ಳಾರಿ ಕಾರಾಗೃಹಕ್ಕೆ ಶಿಫ್ಟ್ ಮಾಡುವಾಗ ಪರಾರಿಯಾಗಿದ್ದ. 1998 ರಲ್ಲಿ ಬೆಂಗಳೂರಿನ ವಿಧವೆಯಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತು. ಇದೇ ವೇಳೆ ಈ ಆದೇಶದ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಉಮೇಶ್ ರೆಡ್ಡಿಗೆ 6 ವಾರಗಳ ಕಾಲಾವಕಾಶ ನೀಡಲಾಗಿದೆ. ಸದ್ಯ ಉಮೇಶ್ ರೆಡ್ಡಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾನೆ.