×
Ad

ಮೀರಾಬಾಯಿ ಕೊಪ್ಪಿಕರ್ ಹಾಗೂ ಸಿದ್ಧಗಂಗಾ ಮಠಕ್ಕೆ `ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’

Update: 2021-09-29 17:46 IST
ಮೀರಾಬಾಯಿ ಕೊಪ್ಪಿಕರ್         ಸಿದ್ಧಗಂಗಾ ಮಠ 

ಬೆಂಗಳೂರು, ಸೆ.29: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೀಡುವ “ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ-ಕರ್ನಾಟಕ” ಪ್ರಶಸ್ತಿಯ ವಿಜೇತರನ್ನು ಪ್ರಕಟಿಸಿದೆ. 2020ನೇ ಸಾಲಿಗೆ ಸ್ವಾತಂತ್ರ್ಯ ಹೋರಾಟಗಾರ್ತಿ “ಮೀರಾಬಾಯಿ ಕೊಪ್ಪಿಕರ್” ಮತ್ತು 2021 ನೇ ಸಾಲಿಗೆ “ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ಧಗಂಗಾ ಮಠ”ವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

ಕರ್ನಾಟಕ ಸರಕಾರವು ಪ್ರತಿವರ್ಷ ಗಾಂಧೀ ತತ್ವಾದರ್ಶಗಳನ್ನು ಆಧರಿಸಿಕೊಂಡು ಸಮಾಜದಲ್ಲಿ ಗಣನೀಯ ಸೇವೆ ಮಾಡಿದ ಗಣ್ಯರನ್ನು ಗುರುತಿಸಿ, ಅವರಿಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಕಳೆದ ವರ್ಷ ಕೋವಿಡ್-19ರ ಹಿನ್ನೆಲೆಯಲ್ಲಿ ಪ್ರಶಸ್ತಿಯನ್ನು ಸರಕಾರ ಪ್ರಕಟಿಸಿರಲಿಲ್ಲ. ಆದ್ದರಿಂದ ಈ ವರ್ಷದ ಪ್ರಶಸ್ತಿಯೊಂದಿಗೆ ಕಳೆದ ವರ್ಷದ ಪ್ರಶಸ್ತಿಯನ್ನೂ ಪ್ರಕಟಿಸಿದೆ.

ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾ. ಅಶೋಕ್ ಬಂಗಾರೆಪ್ಪ್ಪಾ ಹಿಂಚಿಗೇರಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಿ, ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲಾಗಿದೆ.

ಅ.2ರ ಮಹಾತ್ಮ ಗಾಂಧಿ ಜಯಂತಿಯಂದು ಬೆಂಗಳೂರಿನ ಗಾಂಧಿಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರಶಸ್ತಿಯು ತಲಾ ಐದು ಲಕ್ಷ ರೂ. ಹಾಗೂ ಸ್ಮರಣಿಕೆ ಹೊಂದಿರುತ್ತದೆ. 

ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ದಗಂಗಾ ಮಠವು ಡಾ.ಶಿವಕುಮಾರ ಸ್ವಾಮೀಜಿಯವರ ಮಹದಾಶಯದಂತೆ ಕಳೆದ 8 ದಶಕಗಳಿಂದಲೂ ಅನ್ನದಾಸೋಹ ಹಾಗೂ ಅಕ್ಷರ ದಾಸೋಹ ಮಾಡಿದ ರಾಷ್ಟ್ರದಲ್ಲೇ ಪ್ರತಿಷ್ಠಿತ ಸಂಸ್ಥೆಯಾಗಿದೆ. 

ಗಾಂಧಿವಾದಿಗಳಾಗಿದ್ದ ಮೀರಾಬಾಯಿ ಕೊಪ್ಪಿಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ವಿನೋಬಾ ಭಾವೆಯವರ ಜೊತೆಗೂಡಿ, ಕರ್ನಾಟಕದ ಒಟ್ಟು 40 ಸಾವಿರ ಎಕರೆ ಭೂಮಿಯನ್ನು ದಾನ ಮಾಡಿಸುವಲ್ಲಿ ಯಶಸ್ವಿಯಾದವರು. 2008 ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯ ಹಣ ಮತ್ತು ಬಂಗಾರದ ಪದಕವನ್ನು ಬಡವರಿಗೆ ದಾನ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News