2014ರ ಕೋಮು ಗಲಭೆ ಪ್ರಕರಣ; ಬಿಜೆಪಿ ಶಾಸಕ ಯತ್ನಾಳ ಸೇರಿ 134 ಆರೋಪಿಗಳ ಖುಲಾಸೆ

Update: 2021-09-29 12:49 GMT

ಬೆಂಗಳೂರು, ಸೆ.29: 2014 ಮೇ 26ರಂದು ವಿಜಯಪುರ ಪಟ್ಟಣದಲ್ಲಿ ನಡೆದಿದ್ದ ಕೋಮು ಗಲಭೆ ಪ್ರಕರಣದಿಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿ 134 ಆರೋಪಿಗಳನ್ನು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.

ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದಿನದ ನಿಮಿತ್ತ ವಿಜಯೋತ್ಸವದ ವೇಳೆ ನಡೆದ ಗಲಾಟೆ ಕೋಮು ಗಲಭೆಯಾಗಿ ತಿರುಗಿತ್ತು. ಗಲಭೆ ವೇಳೆ ಎರಡು ಕೋಮುಗಳ ಮಧ್ಯೆ ಕಲ್ಲು ತೂರಾಟ ನಡೆದು, ಬೈಕ್ ಹಾಗೂ ಇತರೆ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಘಟನೆ ಕುರಿತು ನಗರದ ಗಾಂಧಿಚೌಕ್ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿದ್ದರು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸೇರಿದಂತೆ ಎರಡು ಕೋಮಿನ 134 ಜನರ ಮೇಲೆ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಸುದೀರ್ಘ ಏಳು ವರ್ಷಗಳ ಕಾಲ ವಿಚಾರಣೆ ನಡೆಸಿದ್ದು, ಬುಧವಾರ ತೀರ್ಪು ಹೊರಬಿದ್ದಿದೆ. ಕೋವಿಡ್ ಕಾರಣದಿಂದಾಗಿ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಲಾಯಿತು.

ವಿಜಯಪುರದ ಎಸ್. ಪಿ. ಕಚೇರಿ ಹಿಂಭಾಗದಲ್ಲಿರುವ ಚಿಂತನ್ ಹಾಲ್ ವಿಶೇಷ ನ್ಯಾಯಾಲಯವಾಗಿ ಪರಿವರ್ತನೆ ಮಾಡಲಾಗಿತ್ತು. ಯತ್ನಾಳ ಸೇರಿ ಇತರೆ ಎಲ್ಲ ಆರೋಪಿಗಳು ಹಾಜರಾಗಿದ್ದರು. ನ್ಯಾಯಾಲಯದ ತೀರ್ಪು ಸ್ವಾಗತ ಮಾಡಿರೋ ಯತ್ನಾಳ ಸೇರಿದಂತೆ ಇತರರು, ತೀರ್ಪು ತೃಪ್ತಿ ತಂದಿದೆ. ಭವಿಷ್ಯದಲ್ಲಿ ಎಲ್ಲರೂ ಸಹೋದರತೆಯಿಂದ ಇರುತ್ತೇವೆ ಎಂದರು.

ಕೆಲ ಕಿಡಿಗೇಡಿಗಳಿಂದ ನಡೆದ ಗಲಾಟೆಯಲ್ಲಿ ಅಮಾಯಕರು ಕಷ್ಟ ಅನುಭವಿಸುವಂತಾಗಿತ್ತು. ನ್ಯಾಯಾಲಯದ ತೀರ್ಪಿನಿಂದ ಸಂತಸವಾಗಿದೆ ಎಂದು ಉಭಯತರು ಹೇಳಿದರು. ಅಲ್ಲದೇ ಎರಡೂ ಸಮುದಾಯದವರು ಪರಸ್ಪರ ಸಂತಸ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News