ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕಾದ ಅಗತ್ಯವಿದೆ: ಸಚಿವ ಆರ್.ಅಶೋಕ್

Update: 2021-09-29 13:14 GMT

ಬೆಂಗಳೂರು, ಸೆ. 29: ‘ಮತಾಂತರದ ಬಗ್ಗೆ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ. ಮತಾಂತರ ಮಾಡುವವರು ದೇಶದ್ರೋಹಿಗಳು. ಅವರು ನೆಲ ಸಂಸ್ಕೃತಿ ಹಾಳುಮಾಡಲು ಮತಾಂತರ ಮಾಡುತ್ತಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕಾದ ಅಗತ್ಯವಿದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಯಾವುದೋ ದೇಶದ ಹಣವನ್ನು ತಂದು ಹೀಗೆ ಮಾಡ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಒಂದು ಸೂಕ್ತ ಕಾನೂನು ತರಬೇಕು. ನಮ್ಮ ಸರಕಾರ ಇರುವುದಕ್ಕೆ ಇದೆಲ್ಲವೂ ಹೊರಗೆ ಬರುತ್ತಿದೆ' ಎಂದು ತಿಳಿಸಿದರು.

‘ಕೊವಿಡ್‍ನಿಂದ ಸತ್ತವರ ಸಂಖ್ಯೆ ಗೊಂದಲವಿದೆ ಎಂಬುದು ಆರೋಪವಷ್ಟೆ. ಕೊರೋನ ಸೋಂಕಿಗೆ ಬಲಿಯಾದವರ ಬಗ್ಗೆ ಕುಟುಂಬಸ್ಥರಲ್ಲಿ ದಾಖಲೆ ಇದೆ. ವೈದ್ಯರು ನೀಡಿರುವ ಸರ್ಟಿಫಿಕೆಟ್ ಕುಟುಂಬಸ್ಥರ ಬಳಿಯಿದೆ. ತಹಶೀಲ್ದಾರ್, ಆರ್‍ಐ ಕಡೆಯಿಂದ ಸತ್ತವರ ಬಗ್ಗೆ ವರದಿಯೂ ಇದೆ. ಮೃತಪಟ್ಟವರಿಗೆ ಆಸ್ಪತ್ರೆಯಿಂದ ಪೇಷಂಟ್ ನಂಬರ್ ಇರುತ್ತದೆ. ಪರಿಹಾರ ವಿತರಣೆಯಲ್ಲಿ ಅಕ್ರಮವಾಗಲು ಅವಕಾಶವೇ ಇರುವುದಿಲ್ಲ ಎಂದು ಅಶೋಕ್ ಸ್ಪಷ್ಟನೆ ನೀಡಿದರು.

ಕೊವಿಡ್ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ರೂ.ಪರಿಹಾರ ಸಿಗಲಿದೆ. ಬಿಪಿಎಲ್ ಕಾರ್ಡ್‍ದಾರರಿಗೆ ಪರಿಹಾರ ಲಭಿಸಲಿದೆ. ಕೇಂದ್ರ ಸರಕಾರ 50 ಸಾವಿರ ರೂ. ಪರಿಹಾರ ನೀಡಲಿದೆ. ನಿನ್ನೆ ಸರಕಾರದಿಂದ ಪರಿಶೀಲನಾ ಆದೇಶ ಹೊರಡಿಸಿದ್ದೇವೆ. ಕೋವಿಡ್ ಪಾಸಿಟಿವ್ ವರದಿ, ರೋಗಿಯ ನಂಬರ್, ಮರಣ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಅರ್ಜಿದಾರರ ಬ್ಯಾಂಕ್ ಅಕೌಂಟ್ ನಂಬರ್ ಕೊಡಬೇಕು. ಇಷ್ಟು ದಾಖಲಾತಿ ನೀಡಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು. ದಾಖಲಾತಿ ಪರಿಶೀಲಿಸಿ ಹಣವನ್ನು ನೇರವಾಗಿ ನೀಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News