ಅ.2ರಂದು 'ಶೆಪರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್' ನ 6ನೇ ವಾರ್ಷಿಕೋತ್ಸವ: ಎಚ್.ವಿಶ್ವನಾಥ್
ಬೆಂಗಳೂರು, ಸೆ.29: ಶೆಪಡ್ರ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥೆಯು ಅ.2ರಂದು ಗುಜರಾತ್‍ನ ಅಹಮದಾಬಾದ್ ನಗರದಲ್ಲಿ 6ನೇ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿ ವಿವಿಧ ಹೆಸರಿನಲ್ಲಿ ಹಂಚಿ ಹೋಗಿರುವ ಕುರುಬ ಸಮುದಾಯವನ್ನು ಒಂದೆಡೆಗೆ ಸೇರಿಸುವುದು ಈ ವಾರ್ಷಿಕೋತ್ಸವ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದು ಮಾಜಿ ಸಚಿವ ಮತ್ತು ಸಂಸ್ಥೆಯ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ತಿಳಿಸಿದರು.
ಪ್ರೆಸ್‍ಕ್ಲಬ್‍ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ನಾನಾ ಭಾಗಗಳಲ್ಲಿ 12 ಕೋಟಿಗೂ ಮೀರಿದ ಕುರುಬರು ಹಂಚಿಹೋಗಿದ್ದಾರೆ. ಅವರನ್ನೆಲ್ಲ ಒಗ್ಗೂಡಿಸುವುದು ಈಗ ಅನಿವಾರ್ಯವಾಗಿದೆ. ಏಕೆಂದರೆ, ಪಾಶ್ಚಿಮಾತ್ಯ ದೇಶಗಳಲ್ಲಿಯೂ ಶೆಪಡ್ರ್ಸ್ ಹೆಸರಿನಿಂದ ಕುರುಬರು ಇದ್ದಾರೆ. ಈಜಿಪ್ಟ್‍ನ ಕೈರೋ ನಗರದಲ್ಲಿ ಕುರುಬರ ಜಾತ್ರೆ ನಡೆದಿದೆ. ನೈಲ್ ನದಿಯ ಉದ್ದಕ್ಕೂ ಕುರುಬರ ಸಂಸ್ಕೃತಿಯನ್ನು ಕಾಣುತ್ತೇವೆ. ಅವರಿಗೆ ಸರಕಾರದಿಂದ ಎಲ್ಲಾ ಸವಲತ್ತು ಸಿಗುತ್ತಿದೆ. ಆದರೆ ಅವರಿಗೆ ಹೋಲಿಸಿಕೊಂಡರೆ ನಮ್ಮ ದೇಶದ ಕುರುಬರಿಗೆ ಸರಕಾರದಿಂದ ಒಳ್ಳೆಯ ಸವಲತ್ತು ಸಿಗುತ್ತಿಲ್ಲ. ಆದ್ದರಿಂದ ಈ ಸಮಾವೇಶವನ್ನು ಏರ್ಪಡಿಸಲಾಗಿದೆ. ಅಲ್ಲಿ ಈ ಕುರಿತು ಚರ್ಚಿಸುತ್ತೇವೆ ಎಂದರು.
ವಾರ್ಷಿಕೋತ್ಸವದಲ್ಲಿ ಘಗನ್ ಸಿಂಗ್ ಕುಲಸ್ತೆ, ಎಸ್.ಪಿ.ಸಿಂಗ್ ಬಫೇರ್, ದತ್ತಾತ್ರೇಯ ಭರಣಿ, ಜೆಟಾ ಬಾಯಿ ಬಾರವಾಡೆ, ವಿಕಾಸ್ ಮಹಾತ್ಮ, ದಿನೇಶ್ ಮೋಹಾನಿ, ಎಗ್ಗಿ ಮಲ್ಲೇಶಂ, ಕರ್ನಾಟಕದಿಂದ ಹೆಚ್.ಎಂರೇವಣ್ಣ, ಬಂಡೆಪ್ಪ ಕಾಶೆಂಪೂರ್, ಆರ್.ಶಂಕರ್, ರಘುನಾಥ್‍ರಾವ್ ಮಲ್ಕಾಪುರೆ ಭಾಗವಹಿಸಲಿದ್ದಾರೆ. ಅಲ್ಲದೇ ರಾಜ್ಯದ ಎಲ್ಲಾ ನಾಯಕರಿಗೂ ಆಹ್ವಾನ ನೀಡಲಾಗುತ್ತದೆ ಎಂದರು.
ಎಸ್ಟಿ ಮೀಸಲಾತಿ ಪಟ್ಟಿಗೆ ಸೇರಿಸುವ ಕುರಿತಾಗಿ ಮಾತನಾಡಿದ ಅವರು, ಎಲ್ಲಾ ಕುರುಬ ನಾಯಕರು ಕುರುಬರನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಕುರುಬ ಪೀಠದ ಮಠಾಧಿಪತಿಗಳೇ ಕುರುಬರನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದ್ದರಿಂದ ಈ ವಿಚಾರವಾಗಿ ಸಮುದಾಯದ ಮುಖಂಡರೊಂದಿಗೆ ಯಾವುದೇ ಬಿನ್ನಾಭಿಪ್ರಾಯವಿಲ್ಲ ಎಂದರು.
ಹಾಗೆಯೇ ಅವರು, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಈ ವರ್ಷದ ದಸರಾ ಉತ್ಸವದ ಉದ್ಘಾಟನೆಯನ್ನು ಕೊಟ್ಟಿರುವುದು ತುಂಬಾ ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಸಂಸ್ಥೆಯ ರಾಷ್ಟ್ರೀಯ ಸಂಚಾಲಕ ಹೆಚ್.ಎಂ.ರೇವಣ್ಣ, ಸಿ.ಎಂ.ನಾಗರಾಜು, ಎಂ.ನಾಗರಾಜ್ ಉಪಸ್ಥಿತರಿದ್ದರು.