ಹಾಸನ: ಜಿಲ್ಲಾಡಳಿತದ ನೆರವಿನೊಂದಿಗೆ ದೇವಸ್ಥಾನ ಪ್ರವೇಶಿಸಿದ ದಲಿತರು

Update: 2021-09-29 14:22 GMT
 ಜಿಲ್ಲಾಡಳಿತದ ನೆರವಿನಿಂದ  ದೇವಾಲಯ ಪ್ರವೇಶಿಸುತ್ತಿರುವ ದಲಿತರು

ಹಾಸನ,ಸೆ.29: ಕಳೆದ 8 ತಿಂಗಳ ಹಿಂದೆ ಜಾತಿ ಕಾರಣಕ್ಕೆ ದಲಿತರಿಗೆ ಹೊಟೇಲ್‌ ಒಳಗೆ ಪ್ರವೇಶ ನಿರಾಕರಿಸಿದ್ದ  ಚನ್ನರಾಯಪಟ್ಟಣ ತಾಲೂಕಿನ ದಿಂಡಗೂರಿನ ಗ್ರಾಮದಲ್ಲಿ ಇದೀಗ ಜಿಲ್ಲಾಡಳಿತದ ನೆರವಿನಿಂದ ದಲಿತರು ದೇವಾಲಯ ಪ್ರವೇಶಿಸಿದ್ದಾರೆ. 

ಮೇಲ್ಜಾತಿ ಮತ್ತು ದಲಿತರ ಜೊತೆಗೆ ತಹಶೀಲ್ದಾರ್‌ ಮಾರುತಿ ರವರು, ಗ್ರಾಮದಲ್ಲಿ ಸಭೆ ನಡೆಸಿದ ಬಳಿಕ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ಭೀಮ್ ಆರ್ಮಿ ಸಂಘಟನೆ, ಮುಜರಾಯಿ ಇಲಾಖೆ ಸಮ್ಮುಖದಲ್ಲಿ ದಿಂಡಗೂರು ಗ್ರಾಮದ ದಲಿತರು ಗ್ರಾಮದ ದೇವಾಲಯಕ್ಕೆ ಪ್ರವೇಶ ಮಾಡಿದರು.

ಭೀಮ್ ಆರ್ಮಿ ಸಂಘಟನೆಯ ಜಿಲ್ಲಾದ್ಯಕ್ಷ ನಟರಾಜ್ ದಿಂಡಗೂರು,  ದೇವಾಲಯ ಪ್ರವೇಶಕ್ಕೆ ಯಾರೂ ಯಾವುದೇ ತಕರಾರು ಮಾಡಲಿಲ್ಲ. ದೇವಸ್ಥಾನ ಪ್ರವೇಶಿಸುವ ಮನಸ್ಥಿತಿ ನಮಗೂ ಇರಲಿಲ್ಲ. ಅದರೆ, ಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ಈ ಕ್ರಮ ಅಗತ್ಯವಾಗಿತ್ತು ಎಂದರು.

ಘಟನೆಯ ಹಿನ್ನೆಲೆ: ಕಳೆದ 8 ತಿಂಗಳ ಹಿಂದೆ ವ್ಯಕ್ತಿಯೋರ್ವರು ದಿಂಡಗೂರಿನ ಹೋಟೆಲ್‌ಗೆ ಹೋದಾಗ ಜಾತಿ ಕಾರಣಕ್ಕೆ ಅವರಿಗೆ ಹೊಟೇಲ್ ಪ್ರವೇಶ ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಭೀಮ್ ಆರ್ಮಿ ಸಂಘಟನೆ ಈ ಅಸ್ಪೃಶ್ಯತೆ ನಿವಾರಣೆ  ಕಾರಣಕ್ಕೆ ದೇವಾಲಯ ಪ್ರವೇಶಿಸಲು ನಿರ್ಧರಿಸಿ.  ತಮಗೆ ರಕ್ಷಣೆ ನೀಡಬೇಕು ಎಂದು ತಹಶೀಲ್ದಾರ್‌, ಪೊಲೀಸ್ ಅಧಿಕಾರಿ, ಮುಜರಾಯಿ ಇಲಾಖೆ, ಸಮಾಜಕಲ್ಯಾಣ ಇಲಾಖೆಗೆ ಮನವಿ ನೀಡಿದ್ದರು.

ಮಂಗಳವಾರ (ಸೆ.28) ರಂದು ಎರಡು ಸಮುದಾಯದ ಜನರ ನಡುವೆ ಶಾಂತಿಸಭೆ ನಡೆಸಿ, ಜಿಲ್ಲಾಡಳಿತ, ಪೊಲೀಸರ ಸಮ್ಮುಖದಲ್ಲಿ ದಲಿತರು ಗ್ರಾಮದ ದೇವಾಲಯಗಳ ಪ್ರವೇಶ ಮಾಡಿದ್ದಾರೆ.

ಗ್ರಾಮದೇವತೆ ಸತ್ಯಮ್ಮ, ಕೇಶವಸ್ವಾಮಿ ದೇವಾಲಯ, ಮಲ್ಲೇಶ್ವರ ದೇವಾಲಯ, ಬಸವಣ್ಣ ದೇವಾಲಯ ಸೇರಿದಂತೆ ಗ್ರಾಮದಲ್ಲಿನ ದೇವಾಲಯಗಳಿಗೆ ಪ್ರವೇಶಿಸಿ ದಲಿರು ಪೂಜೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಡಿವೈಎಸ್ಪಿ ಲಕ್ಷ್ಮಣಗೌಡ, ಸರ್ಕಲ್ ಇನ್ಸ್ಪೆಕ್ಟರ್ ಸುಬ್ರಹ್ಮಣ್ಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ವೀಣಾ, ಭೀಮಾರ್ಮಿ ತಾಲೂಕು ಅಧ್ಯಕ್ಷ ರಾಮಚಂದ್ರ ,ತಾಲೂಕು ಸಂಚಾಲಕ ಜಯಪ್ರಕಾಶ್, ತೀರ್ಥ, ಸಂತೋಷ ನಟರಾಜ್, ದಲಿತ ಮುಖಂಡರಾದ ಗೋವಿಂದರಾಜು ತಿಮ್ಮಯ್ಯ ಮುಂತಾದವರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News