ಮುಖ್ಯಮಂತ್ರಿಯಾಗುವ ಸಿದ್ದರಾಮಯ್ಯ ಕನಸು ಕನಸಾಗಿಯೇ ಉಳಿಯಲಿದೆ: ಶಾಸಕ ಕೆ.ಜಿ.ಬೋಪಯ್ಯ
ಮಡಿಕೇರಿ ಸೆ.29 : ಬಿಜೆಪಿ ಮತ್ತು ಆರೆಸ್ಸೆಸ್ ನ್ನು ತಾಲಿಬಾನ್‍ಗೆ ಹೋಲಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೀಳು ಸಂಸ್ಕೃತಿ ಪ್ರದರ್ಶಿಸಿದ್ದಾರೆ ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಟೀಕಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೆ.ಜಿ.ಬೋಪಯ್ಯ, ಮುಂದಿನ ಮುಂಖ್ಯಮಂತ್ರಿಯಾಗುವ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಅವರ ಕನಸು ಎಂದೆಂದೂ ನನಸಾಗುವುದಿಲ್ಲ ಎಂದು ಹೇಳಿದ ಬೋಪಯ್ಯ, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಸಿದ್ದರಾಮಯ್ಯ ಕನಸು ಕನಸಾಗಿಯೇ ಉಳಿಯುತ್ತದೆ ಎಂದರು.
ಆರೆಸ್ಸೆಸ್ ನ ದೇಶಭಕ್ತಿಯ ಸಂಸ್ಕೃತಿ ತಿಳಿಯದೇ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಯಾರ ವಿರುದ್ಧವಾದರು ಮಾತನಾಡುವಾಗ ಮಾಜಿ ಮುಖ್ಯಮಂತ್ರಿಗಳಿಗೆ ಗಂಭೀರತೆ ಇರಬೇಕು. ಇಂತಹ ಬಾಲಿಶ ಹೇಳಿಕೆ ನೀಡಿರೋದು ಅತ್ಯಂತ ಖಂಡನೀಯ. ಈ ರೀತಿಯ ಹೇಳಿಕೆಯನ್ನು ಮಾಜಿ ಸಿಎಂ. ಸಿದ್ದರಾಮಯ್ಯರಿಂದ ಯಾರು ಕೂಡ ನೀರಿಕ್ಷೆ ಮಾಡಿರಲಿಲ್ಲ ಎಂದರು.
ಆರೆಸ್ಸೆಸ್ ಹಾಗೂ ಬಿಜಿಪಿಗರು ತಾಲಿಬಾನಿಗಳು ಎಂಬ ತಮ್ಮ ಹೇಳಿಕೆಗೆ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ ಬೋಪಯ್ಯ, ದೇಶ ಭಕ್ತರನ್ನು ಅತ್ಯಂತ ಹೆಚ್ಚಾಗಿ ಹೊಂದಿರುವ ಸಂಘಟನೆ ಆರೆಸ್ಸೆಸ್ ಎಂಬುದನ್ನು ಮರೆಯಬಾರದು. ಇಂತಹ ಸಂಘಟನೆ ವಿರುದ್ದ ಬಾಯಿಗೆ ಬಂದಂತೆ ಹೇಳಿಕೆ ಸಿದ್ದರಾಮಯ್ಯ ನೀಡಿದ್ದು ಖಂಡನೀಯ ಎಂದೂ ಬೋಪಯ್ಯ ಹೇಳಿದರು.
ಮತಾಂತರ ವಿರೋಧಿ ಕಾನೂನು
ಕೊಡಗೂ ಸೇರಿದಂತೆ ರಾಜ್ಯದಲ್ಲಿ ಮತಾಂತರ ಹೆಚ್ಚಾಗುತ್ತಿದೆ. ಈ ಬಗ್ಗೆ ಕಳೆದ ಅಧಿವೇಶನದಲ್ಲಿಯೂ ವ್ಯಾಪಕ ಚರ್ಚೆಯಾಗಿದೆ. ನವಂಬರ್‍ನಲ್ಲಿ ನಡೆಯಲಿರುವ ರಾಜ್ಯ ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಯಾಗುವುದು ಖಂಡಿತಾ ಎಂದು ಹೇಳಿದ ಬೋಪಯ್ಯ, ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಮತಾಂತರ ನಿಲ್ಲುತ್ತದೆ. ಬಿಜೆಪಿ ಅಂತಹ ಕಾನೂನು ಜಾರಿಗೊಳಿಸಲಿದೆ ಎಂದರು.
ಸಾಂಪ್ರದಾಯಿಕ ದಸರಾ
ಕೊಡಗಿನಲ್ಲಿ ದಸರಾ ಉತ್ಸವ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ನಡೆಯಬೇಕು. ಕೋವಿಡ್ ನಿಯಮ ಪಾಲನೆ ಮುಖ್ಯ. ಹೆಚ್ಚು ಜನಸಂದಣಿ ಸೇರುವುದು ಸೂಕ್ತವಲ್ಲ. ಪ್ರಧಾವಿ ಮೋದಿ ಕೂಡ ಮನ್ ಕೀ ಬಾತ್‍ನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚಿನ ಹಬ್ಬಗಳು, ಜನಸಂದಣಿಯಿಂದ ಮತ್ತೆ ಕೋವಿಡ್ ಹೆಚ್ಚಾಗುವ ಬಗ್ಗೆ ಎಚ್ಚರಿಸಿದ್ದಾರೆ. ಹೀಗಾಗಿ ಪ್ರತಿಯೋರ್ವರೂ ಈ ಬಗ್ಗೆ ಗಮನ ಹರಿಸುವುದು ಸೂಕ್ತ ಎಂದು ಬೋಪಯ್ಯ ಸಲಹೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಹಾಜರಿದ್ದರು.