ಅನರ್ಹರ ನೇಮಕಾತಿಗೆ ಸಚಿವೆ ಜೊಲ್ಲೆ ಶಿಫಾರಸ್ಸು: ಸರಕಾರದ ಆದೇಶ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು, ಸೆ.29: ಬಾಲನ್ಯಾಯ ಕಾಯ್ದೆಯ ನಿಯಮಗಳ ಅಡಿಯಲ್ಲಿನ ರಾಜ್ಯ ಆಯ್ಕೆ ಸಮಿತಿಗೆ ಕಾನೂನುಬಾಹಿರವಾಗಿ ಇಬ್ಬರು ಸದಸ್ಯರನ್ನು ನೇಮಕ ಮಾಡಿದ್ದ ರಾಜ್ಯ ಸರಕಾರದ ಆದೇಶವನ್ನು ಹೈಕೋರ್ಟ್ ಬದಿಗೆ ಸರಿಸಿದೆ. ಅಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ, ಹಾಲಿ ಹಿಂದೂ ಧಾರ್ಮಿಕ ದತ್ತಿ, ಹಜ್ ಮತ್ತು ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ನಿರ್ದೇಶನದಂತೆ ಸದಸ್ಯರನ್ನು ನೇಮಕ ಮಾಡಲಾಗಿತ್ತು.
ಬಾಲಾಪರಾಧ ನ್ಯಾಯದಾನ ಆಯ್ಕೆ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವ ರಾಜ್ಯ ಆಯ್ಕೆ ಸಮಿತಿಗೆ ಅನರ್ಹರನ್ನು ನೇಮಕ ಮಾಡಲಾಗಿದೆ ಎಂದು ಆಕ್ಷೇಪಿಸಿ ವಕೀಲೆ ಸುಧಾ ಕಟ್ವಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ನೇಮಕಗೊಂಡಿದ್ದ ವ್ಯಕ್ತಿಗಳಿಗೆ ಅನುಭವ ಹಾಗೂ ಅರ್ಹತೆಯ ಕೊರತೆಯಿದೆ ಎಂದು ಹೇಳಿದೆ.
ಸಚಿವೆ ಶಶಿಕಲಾ ಜೊಲ್ಲೆ ಆದೇಶದಂತೆ ಬಾಗಲಕೋಟೆಯ ಲತಾ ಜಗದೀಶ್‍ನಾರಾಯಣ ಮತ್ತು ಹುಬ್ಬಳ್ಳಿಯ ಎಸ್.ಎನ್. ಬಾದಸ್ಕರ್ ಅವರನ್ನು ನೇಮಿಸಲಾಗಿತ್ತು. ಆದರೆ, ಆ ಆದೇಶ ಪತ್ರಕ್ಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಹಿ ಮಾಡಿಲ್ಲ ಎಂಬುದನ್ನು ಪೀಠ ಗಮನಿಸಿತು.
ಸದಸ್ಯರಾಗಿ ನೇಮಕಗೊಂಡವರು ದಾಖಲಿಸಿರುವ ಅನುಭವಗಳು ಬಾಲನ್ಯಾಯ ಕಾಯ್ದೆಯಲ್ಲಿನ ನಿಬಂಧನೆಗಳಿಗೆ ಅನುಗುಣವಾಗಿಲ್ಲ. ಲತಾ ಅವರು ಜಲ ಸಂವರ್ಧನೆ ಯೋಜನೆಯಡಿ ಕಾರ್ಯನಿರ್ವಹಿಸಿದ 7 ವರ್ಷಗಳ ಅನುಭವ ದಾಖಲಿಸಿದ್ದಾರೆ. ಬಾದಸ್ಕರ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದು ಮಕ್ಕಳ ಅಭಿವೃದ್ಧಿ ಅಥವಾ ಮಕ್ಕಳ ರಕ್ಷಣೆ ವಿಭಾಗದಲ್ಲಿ ಯಾವುದೇ ಅನುಭವ ಹೊಂದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.
ಸರಕಾರದ ಈ ರೀತಿಯ ಕ್ರಮಗಳಿಂದ ಕಾಯ್ದೆಯ ಉದ್ದೇಶವೇ ವಿಫಲವಾಗಲಿದೆ. ಮಕ್ಕಳ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದವರು ಮತ್ತು ಬಾಲನ್ಯಾಯ ಕಾಯ್ದೆ 2015ರ ಪ್ರಕಾರ ನಿಗದಿಪಡಿಸಿರುವ ಅರ್ಹತೆ ಇರುವವರನ್ನೇ ನೇಮಿಸಬೇಕು ಎಂದು ಪೀಠ ತಿಳಿಸಿತು. ಅರ್ಜಿದಾರರ ಪರವಾಗಿ ವಕೀಲ ಎಸ್.ಉಮಾಪತಿ ಅವರು ವಾದ ಮಂಡಿಸಿದ್ದರು.