×
Ad

ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದಲ್ಲಿ ಅಧಿಕಾರಿಗಳ ನಿರಾಸಕ್ತಿ ಸಲ್ಲ: ಸಚಿವ ಪ್ರಭು ಚೌಹಾಣ್

Update: 2021-09-29 21:06 IST
: ಸಚಿವ ಪ್ರಭು ಚೌಹಾಣ್ 

ಬೆಂಗಳೂರು, ಸೆ. 29: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಸಮರ್ಪಕ ಅನುಷ್ಠಾನದಲ್ಲಿ ಇಲಾಖೆಯ ಅಧಿಕಾರಿಗಳು ಹೆಚ್ಚು ಆಸಕ್ತಿ ವಹಿಸಬೇಕು ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಸಲಹೆ ನೀಡಿದ್ದಾರೆ.

ಬುಧವಾರ ಇಲ್ಲಿನ ಹೆಬ್ಬಾಳದ ಪಶುಪಾಲನಾ ಭವನದಲ್ಲಿ ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗೋಹತ್ಯೆ ನಿಷೇಧದ ನಡುವೆ ಅಕ್ರಮ ಗೋವುಗಳ ಸಾಗಣೆ ನಡೆಯುತ್ತಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಕಿಡಿಕಾರಿದರು.

ಗೋವು ಕೇವಲ ನಮ್ಮ ಸಂಸ್ಕೃತಿಯ ಭಾಗವಲ್ಲ, ರೈತನ ಜೀವನಾಧಾರ. ಪರಿಸರ ವ್ಯವಸ್ಥೆಯಲ್ಲಿ, ಮಾನವನ ಜೀವನದಲ್ಲಿ ಗೋವಿನ ಪಾತ್ರ ಬಹುದೊಡ್ಡದಿದೆ, ಗೋ ಸಂರಕ್ಷಣೆ ಜವಾಬ್ದಾರಿಯಿಂದ ನಿರ್ವಹಿಸಿ. ಎಲ್ಲ ಜಿಲ್ಲೆಗಳಲ್ಲಿ ಅಧಿಕಾರಿಗಳು ಗೋವುಗಳ ಆರೋಗ್ಯದ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸಿ ಕಾಲುಬಾಯಿ ರೋಗದಿಂದ ಕರ್ನಾಟಕವನ್ನು ಮುಕ್ತ ಮಾಡಲು ಅಧಿಕಾರಿಗಳು ಶ್ರಮವಹಿ ಎಂದು ಹೇಳಿದರು.

ಗೋವುಗಳಲ್ಲಿ ಇತ್ತೀಚೆಗೆ ವ್ಯಾಪಕವಾಗಿ ರೋಗೋದ್ರೇಕ ಕಂಡುಬರುತ್ತಿದೆ. ಗೋವು ರೈತರ ಆದಾಯದ ಮೂಲ ಆಗಿರುವುದರಿಂದ ಅವುಗಳ ಆರೋಗ್ಯದ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ನಮ್ಮ ಮೇಲಿದೆ. ಚಿಕಿತ್ಸೆ ಕುರಿತಾಗಿ ಪ್ರಾಣಿ ಕಲ್ಯಾಣ ಸಹಾಯವಾಣಿಗೆ ಬರುತ್ತಿರುವ ಕರೆಗಳನ್ನು ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆ ನೀಡಲು ಮುಂದಾಗಿ ಎಂದ ಅವರು, ರೋಗ ಕಂಡುಬಂದ ಎಲ್ಲ ಪ್ರದೇಶದಲ್ಲಿ ಆದ್ಯತೆ ಮೇಲೆ ರಿಂಗ್ ವ್ಯಾಕ್ಸಿನ್ ಕೈಗೊಳ್ಳಿ ಎಂದರು.

ಜಿಲ್ಲೆಗೊಂದು ಗೋಶಾಲೆ ಪ್ರಗತಿ: ರಾಜ್ಯದಲ್ಲಿ ಗೋಹತ್ಯೆ ನೀಷೇಧ ಜಾರಿಯಾದ ನಂತರ ಗೋವುಗಳ ಸಂರಕ್ಷಣೆಗೆ ಇಲಾಖೆ ಬದ್ಧವಾಗಿದ್ದು ಜಿಲ್ಲೆಗೊಂದು ಗೋಶಾಲೆ ತೆರೆಯಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಗೋಮಾಳವನ್ನು ಇಲಾಖೆಗೆ ಪಡೆಯುವ ಕಾರ್ಯ ಜಿಲ್ಲೆಗಳಲ್ಲಿ ನಡೆದಿದ್ದು ಶೀಘ್ರದಲ್ಲಿ ಸಿಎಂ ಅವರೊಂದಿಗೆ ಚರ್ಚೆ ಮಾಡಿ ಗೋಶಾಲೆಯ ಉದ್ಘಾಟನೆ ಮಾಡಲಾಗುವುದು. ಸದ್ಯ ಕೆಲವು ಜಿಲ್ಲೆಗಳಲ್ಲಿ ಗೋಶಾಲೆಗಳ ಜಮೀನಿನ ಹಸ್ತಾಂತರ ಬಾಕಿ ಇದ್ದು ಇಲಾಖೆಯ ಕಾರ್ಯದರ್ಶಿ, ಆಯುಕ್ತರು ಹಾಗೂ ಉಪನಿರ್ದೇಶಕರ ಹೆಚ್ಚು ವೇಗದಲ್ಲಿ ಗೋಶಾಲೆ ತೆರೆಯುವ ಕಾರ್ಯ ಪೂರ್ಣಗೊಳಿಸಿ ಎಂದು ನುಡಿದರು.

ಪಶುಸಂಗೋಪನೆ ಇಲಾಖೆಯ ಎಲ್ಲ ಯೋಜನೆಗಳು ಅಧಿಕಾರಿಗಳು ಜನಸಾಮಾನ್ಯರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಇದಕ್ಕೂ ಮೊದಲು ಅಧಿಕಾರಿಗಳಿಗೆ ಯೋಜನೆಗಳ ಸಮರ್ಪಕವಾದ ಮಾಹಿತಿ ಇರಬೇಕು ಇಲ್ಲವಾದಲ್ಲಿ ಯೋಜನೆ ಅನುಷ್ಠಾನದಲ್ಲಿ ಹಿನ್ನಡೆ ಆಗುತ್ತದೆ ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪರಿಹಾರ ವಿಳಂಬಕ್ಕೆ ಅಸಮಾಧಾನ: ಅನುಗ್ರಹ ಯೋಜನೆಯ ಹಣ ಬಿಡುಗಡೆಯಾದರು ಅಧಿಕಾರಿಗಳ ನಿರ್ಲಕ್ಷದಿಂದ ಫಲಾನುಭವಿಗಳಿಗೆ ಪರಿಹಾರ ದೊರಕದಿರುವುದಕ್ಕೆ ಎಲ್ಲ ಜಿಲ್ಲೆಯ ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅನುಗ್ರಹ ಯೋಜನೆಗೆ ಈಗಾಗಲೇ ಒಟ್ಟು ರೂ. 39 ಕೋಟಿ ರೂ.ಬಿಡುಗಡೆ ಆಗಿದ್ದು ಎಲ್ಲ ಫಲಾನುಭವಿಗಳಿಗೆ ಶೀಘ್ರವಾಗಿ ಪರಿಹಾರ ತಲುಪುವಂತೆ ನೋಡಿಕೊಳ್ಳಿ. ಇಲ್ಲವಾದಲ್ಲಿ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News