ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡುವೆ: ಅಬ್ದುಲ್ ಅಝೀಮ್

Update: 2021-09-29 15:39 GMT

ಕಲಬುರಗಿ, ಸೆ.29: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಹಾಗೂ ಆಯೋಗದ ಕಾರ್ಯದರ್ಶಿ ಮುಹಮ್ಮದ್ ನಝೀರ್ ಇಲ್ಲಿನ ಜಿಲ್ಲಾ ಪಂಚಾಯತ್‍ನ ಹಳೆ ಸಭಾಂಗಣದಲ್ಲಿ ಅಲ್ಪಸಂಖ್ಯಾತರ ಸಮುದಾಯದ ಸಾರ್ವಜನಿಕರ ಕುಂದು-ಕೊರತೆಗಳ ಅಹವಾಲು ಸ್ಪೀಕರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ಅಝೀಮ್, ವಕ್ಫ್ ಬೋರ್ಡ್‍ಗೆ ಸಂಬಂಧಿಸಿದ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. 

ವಕ್ಫ್ ಆಸ್ತಿ, ಜಾತಿ ಪ್ರಮಾಣ ಪತ್ರ, ವಿದ್ಯಾರ್ಥಿ ವೇತನ ಹಾಗೂ ವಿವಿಧ ಯೋಜನೆಗಳ ಲಾಭ ಪಡೆಯಲು ಆಗುತ್ತಿರುವ ಸಮಸ್ಯೆಗಳ ಕುರಿತು ಉನ್ನತ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗುವುದು. ಪ್ರಧಾನ ಮಂತ್ರಿ ಅವರ 15 ಅಂಶಗಳ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಅವರು ತಿಳಿಸಿದರು. 

ಸಾರ್ವಜನಿಕ ಕುಂದು ಕೊರತೆ ಅಹವಾಲು ಸ್ವೀಕರಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ಜಿಲ್ಲಾಧ್ಯಕ್ಷ ಮೌಲಾಲಿ ನದಾಫ್ ಮನವಿ ಸಲ್ಲಿಸಿ, ನದಾಫ್ ಸಮುದಾಯಕ್ಕೆ ಪ್ರವರ್ಗ-1 ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಈ ಕುರಿತು ಆಯೋಗದ ವತಿಯಿಂದ ಆದೇಶ ಹೊರಡಿಸುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಅಬ್ದುಲ್ ಅಝೀಮ್ ನದಾಫ್/ಪಿಂಜಾರ ಸಮುದಾಯದವರಿಗೆ ಈಗಾಗಲೇ ಪ್ರವರ್ಗ-1 ಜಾತಿ ಪ್ರಮಾಣ ಪತ್ರ ನೀಡಲು ಗೆಜೆಟ್‍ನಲ್ಲಿ ಆದೇಶ ಹೊರಡಿಸಲಾಗಿದೆ. ಶಾಲೆಯ ದಾಖಲಾತಿಯಲ್ಲಿ ಉಪಜಾತಿ ನಮೂದಿಸಬೇಕಾಗಿರುತ್ತದೆ. ಹೀಗಾಗಿ ಗೆಜೆಟ್ ಪ್ರಕಾರ ಪ್ರವರ್ಗ-1 ಜಾತಿ ಪ್ರಮಾಣ ಪತ್ರ ನೀಡಲು ತಹಶೀಲ್ದಾರ್ ಅವರಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು. 

ಸಭೆಯಲ್ಲಿ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕ ಸುರೇಶ್ ಎಸ್.ತಂಗಾ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮೆಹಮೂದ್ ಎಸ್, ಜಿಲ್ಲಾ ಒಕ್ಕೂಟದ ಅಧಿಕಾರಿ ಹಝ್ರತ್ ಅಲಿ, ಅಲ್ಪಸಂಖ್ಯಾತರ ಸಮುದಾಯದ ಸಂಘ ಸಂಸ್ಥೆಗಳ ಮುಖಂಡರು ಸೇರಿದಂತೆ ಅನೇಕರು ಉಪಸ್ಥಿತರಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News