ಅನೈತಿಕ ಬಿಜೆಪಿ ಸರಕಾರದಲ್ಲಿ ಕಾರಜೋಳ ಪಾಪದ ಸಚಿವ: ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್

Update: 2021-09-29 15:47 GMT

ಬೆಂಗಳೂರು, ಸೆ. 29: ‘ಕೃಷ್ಣಾ ಮೇಲ್ದಂಡೆ ಯೋಜನೆ ಕಾಂಗ್ರೆಸ್ ಪಾಪದ ಕೂಸು ಎಂಬ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿಕೆ ಸರಿಯಲ್ಲ. ಅನೈತಿಕ ಬಿಜೆಪಿ ಸರಕಾರದಲ್ಲಿ ಕಾರಜೋಳ ಪಾಪದ ಸಚಿವರಾಗಿದ್ದಾರೆ' ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಂ.ಬಿ.ಪಾಟೀಲ್ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.

ಬುಧವಾರ ವಿಜಯಪುರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗೋವಿಂದ ಕಾರಜೋಳ ಅವರು ಬಾಯಿ ಚಪಲಕ್ಕೆ ಅಸಂಬದ್ಧ ಹೇಳಿಕೆ ನೀಡುವುದು ಅವರ ಹಿರಿಯತನಕ್ಕೆ ಶೋಭೆ ತರುವುದಿಲ್ಲ. ಅನುಭವಿ ರಾಜಕಾರಣಿ ಹಾಗೂ ಜವಾಬ್ದಾರಿಯುತ ಸಚಿವರಾಗಿದ್ದುಕೊಂಡು ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಇಂತಹ ಹೇಳಿಕೆ ನೀಡುವುದು ಖಂಡನೀಯ' ಎಂದು ಟೀಕಿಸಿದರು.

‘ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಮಾತನಾಡುವಾಗ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ ಅವರ ಹೆಸರನ್ನು ಕಾರಜೋಳ ಪ್ರಸ್ತಾಪಿಸಿದ್ದಾರೆ. 1964ರಲ್ಲಿ ಶಾಸ್ತ್ರಿ ಅವರು ಆಲಮಟ್ಟಿಗೆ ಅಡಿಗಲ್ಲು ಹಾಕದಿದ್ದರೆ ನಾನಾಗಲಿ, ನೀವಾಗಲಿ ಇಂದು ನೀರಾವರಿ ಸಚಿವರಾಗುವ ಪ್ರಶ್ನೆಯೇ ಬರುತ್ತಿರಲಿಲ್ಲ. ಆಲಮಟ್ಟಿ, ತುಂಗಭದ್ರಾ, ಹಿಡಕಲ್ ಸೇರಿದಂತೆ ಈ ದೇಶದ ಎಲ್ಲ ಜಲಾಶಯಗಳು ಕಾಂಗ್ರೆಸ್ ಕೊಡುಗೆ' ಎಂದು ವಾಗ್ದಾಳಿ ನಡೆಸಿದರು.

'ನೀರಾವರಿ ಸೌಲಭ್ಯಕ್ಕಾಗಿ ಅಖಂಡ ವಿಜಯಪುರ ಜಿಲ್ಲೆಯ ಜನ ಮಾಜಿ ಪ್ರಧಾನಿ ಇಂದಿರಾಗಾಂಧಿ, ಮಾಜಿ ಸಿಎಂ ನಿಜಲಿಂಗಪ್ಪ ಅವರನ್ನು ಬಂಗಾರದಲ್ಲಿ ತೂಗಿದ್ದರು ಎಂದು ಕಾರಜೋಳ ಹೇಳಿದ್ದಾರೆ. ಆದರೆ, ಬಂಗಾರದಲ್ಲಿ ತೂಗಿದ್ದು ನೀರಾವರಿಗಾಗಿ ಅಲ್ಲ, ಯುದ್ಧದ ಸಲುವಾಗಿ ಧನಸಹಾಯ ಮಾಡಿದ್ದರು ಎಂಬ ಇತಿಹಾಸ ಗೊತ್ತಿದ್ದರೂ ತಿರುಚಿ ಹೇಳಿಕೆ ನೀಡುವುದು ತಮ್ಮ ಹಿರಿತನಕ್ಕೆ ಶೋಭೆ ತರುವುದಿಲ್ಲ' ಎಂದು ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

‘ಮುಧೋಳ ತಾಲೂಕಿನ ಮಾಚಕನೂರು, ಅಳಗುಂಡಿಯಲ್ಲಿ ಆಲಮಟ್ಟಿ ಹಿನ್ನೀರಿನಿಂದ ಮನೆಗಳ ಒಳಗೆ ಹಾವು, ಚೇಳು, ಕಪ್ಪೆ ಬರುತ್ತಿವೆ. ತಕ್ಷಣ ಸ್ಥಳಾಂತರ ಮಾಡಬೇಕೆಂದು ಈ ಹಿಂದೆ ಕಾರಜೋಳ ಆಗ್ರಹಿಸಿದ್ದರು. ಇದೀಗ ಈ ಗ್ರಾಮಗಳ ಮನೆಗಳಿಗೆ ಹಾವು, ಹೇಳು, ಕಪ್ಪೆ ಹೋಗುತ್ತಿಲ್ಲವೇ? ಕನಿಷ್ಠ ಕಾಳಜಿ ಇದ್ದರೆ ಹಾವು, ಚೇಳು ಇರುವ ನಿಮ್ಮ ಕ್ಷೇತ್ರದ ಗ್ರಾಮಗಳನ್ನಾದರೂ ಸ್ಥಳಾಂತರ ಮಾಡಿ ತೋರಿಸಿ' ಎಂದು ಪಾಟೀಲ್ ವ್ಯಂಗ್ಯವಾಡಿದರು.  

‘ನಾನು ಜಲಸಂಪನ್ಮೂಲ ಇಲಾಖೆ ಸಚಿವನಾಗಿದ್ದ ಅವಧಿಯಲ್ಲಿ ಏನು ಮಾಡಬೇಕು ಎಂಬುದನ್ನು ಮಾಡಿ ತೋರಿಸಿದ್ದೇನೆ. ಈಗ ನಿಮಗೆ ಅವಕಾಶ ಸಿಕ್ಕಿದೆ. ಹಿರಿಯರಾಗಿರುವುದರಿಂದ ಮುಂದೆ ಅವಕಾಶ ಸಿಗುವ ಸಾಧ್ಯತೆ ಇಲ್ಲ. ಹೀಗಾಗಿ ಸಿಕ್ಕಿರುವ ಅವಕಾಶವನ್ನು ಆ ಭಾಗದ ಜನರ ಶ್ರೇಯೋಭಿವೃದ್ಧಿಗಾಗಿ ಸದ್ಬಳಕೆ ಮಾಡಿಕೊಳ್ಳಿ'

-ಎಂ.ಬಿ.ಪಾಟೀಲ್, ಮಾಜಿ ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News