ಲೋಕಸಭಾ ಸದಸ್ಯರಿಗೆ ಧ್ವನಿಯೇ ಇಲ್ಲ: ವಾಟಾಳ್ ನಾಗರಾಜ್

Update: 2021-09-29 17:21 GMT

ಬೆಂಗಳೂರು, ಸೆ.29: ರಾಜ್ಯದಿಂದ ಆಯ್ಕೆಯಾದ ಲೋಕಸಭಾ ಸದಸ್ಯರಿಗೆ ಧ್ವನಿಯೇ ಇಲ್ಲ ರಾಜ್ಯದ ಸಮಸ್ಯೆಗಳ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಾಗೆಯೇ ಇದುವರೆಗೂ ಮೇಕೆದಾಟು ವಿಚಾರವಾಗಿ ಅಥವಾ ಕೇಂದ್ರವು ಉದ್ದೇಶಪೂರ್ವಕವಾಗಿ ಕನ್ನಡಿಗರ ಮೇಲೆ ಹಿಂದಿ ಬಾಷೆಯನ್ನು ಹೇರುವುದರ ಬಗ್ಗೆಯಾಗಲಿ ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಆರೋಪಿಸಿದರು. 

ಪ್ರೆಸ್‍ಕ್ಲಬ್‍ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಸರಕಾರವು ಇಡೀ ರಾಜ್ಯದ ಎಲ್ಲಾ ಕೆರೆಗಳಿಗೂ ನೀರು ಹರಿಸಬೇಕು. ಆದ್ದರಿಂದ ಮೇಕೆದಾಟು ಆರಂಭಕ್ಕೆ ಸರಕಾರವು ಕ್ರಮ ತೆಗೆದುಕೊಳ್ಳಬೇಕು. ಬೇರೆ ರಾಜ್ಯಗಳಿಗಿಂತ ಕಾವೇರಿ ನೀರಿನ ಅವಶ್ಯಕತೆ ನಮಗೆ ಹೆಚ್ಚಾಗಿದೆ ಎಂದು ತಿಳಿಸಿದರು.

ಕಾವೇರಿ ನಿರ್ವಹಣಾ ಮಂಡಳಿಯನ್ನು ಈಗಲೂ ವಿರೋಧಿಸುತ್ತೇನೆ. ಈ ಕಾವೇರಿ ನಿರ್ವಹಣಾ ಮಂಡಳಿಗೆ ಸ್ಥಾಪಿತವಾದ ದಿನದಿಂದ ರಾಜ್ಯದ ಜನರಿಗೆ ತೊಂದರೆಯಾಗಿದೆ. ಕಾವೇರಿ ನಿರ್ವಹಣಾ ಮಂಡಳಿಯಿಂದ ನಾವು ಕಟ್ಟಿದ ಅಣೆಕಟ್ಟು, ನಾವು ಶೇಖರಿಸಿದ ನೀರಿನ ಮೇಲೆ ತಮಿಳುನಾಡು, ಕೇರಳ, ಪಾಂಡಿಚೇರಿಯವರು ಅಧಿಕಾರ ಚಲಾಯಿಸಿದಂತಾಗಿದೆ ಎಂದರು. 

ಹಿಂದಿಯನ್ನು ವಿರೋಧಿಸಿ ಮಾತನಾಡಿದ ಅವರು, ಬ್ಯಾಂಕು, ರೈಲ್ವೆ ಸೇರಿದಂತೆ ಇತರ ಕೇಂದ್ರ ಸರಕಾರದ ಎಲ್ಲ ಕಚೇರಿಗಳಲ್ಲಿಯೂ ಕನ್ನಡದಲ್ಲಿ ವ್ಯವಹಾರ ನಡೆಯಬೇಕು. ಅದನ್ನು ಹೊರತುಪಡಿಸಿ, ಬಲವಂತವಾಗಿ ಯಾವುದೇ ಕಾರಣಕ್ಕೂ ಹಿಂದಿ ಭಾಷೆಯನ್ನು ಕನ್ನಡಿಗರ ಮೇಲೆ ಹೇರಬಾರದು. ಕರ್ನಾಟಕದಲ್ಲಿರುವ ಕೇಂದ್ರ ಸರಕಾರದ ಕಚೇರಿಗಳಲ್ಲಿ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News