ಪಂಚಮಸಾಲಿ ಸಮುದಾಯಕ್ಕೆ ʼ2ಎʼ ಮೀಸಲಾತಿ ನೀಡುವ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇನೆ: ಕೋಟ ಶ್ರೀನಿವಾಸ ಪೂಜಾರಿ

Update: 2021-09-30 14:36 GMT

ಬೆಂಗಳೂರು, ಸೆ. 30: `ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ `2 ಎ' ಮೀಸಲಾತಿ ಬೇಡಿಕೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು' ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೆ ಅವರ ಅಭಿಪ್ರಾಯ ತಿಳಿಸಲು ಅವಕಾಶವಿದೆ. ಹೀಗಾಗಿ ಪಂಚಮಸಾಲಿ ಸಮುದಾಯದ ಶ್ರೀಗಳ ಹೇಳಿಕೆ ಸಂಬಂಧ ಸಿಎಂ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಪ್ರಕಟಿಸಲಾಗುವುದು' ಎಂದು ಸ್ಪಷ್ಟಣೆ ನೀಡಿದರು.

ತಾನು ಮುಜರಾಯಿ ಇಲಾಖೆ ಸಚಿವನಾಗಿದ್ದ ಅವಧಿಯಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಿಡುಗಡೆ ಮಾಡಿರುವ ಅನುದಾನ ತಡೆ ಹಿಡಿದಿಲ್ಲ. ಕೋವಿಡ್ ಮಹಾಮಾರಿ ಕಾರಣ ಆರ್ಥಿಕ ಸಂಕಷ್ಟವಿದ್ದು, ಆ ಹಿನ್ನೆಲೆಯಲ್ಲಿ ತಡೆ ಹಿಡಿದಿರುವ ಸಾಧ್ಯತೆಗಳಿರಬಹುದು. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಲಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸ್ವಚ್ಛತೆ ಶ್ರಮದಾನ: ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಂದು ಸಮಾಜಕಲ್ಯಾಣ ಇಲಾಖೆಯ ಪ್ರತಿಯೊಂದು ಕಚೇರಿ, ಹಾಸ್ಟೆಲ್, ವಸತಿ ಶಾಲೆಗಳು ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾಜ ಕಲ್ಯಾಣ ಹಾಗೂ ಹಿಂ.ವರ್ಗಗಳ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಚೇರಿಗಳು, ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗುವುದು ಎಂದರು.

ರಾಜ್ಯದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ವ್ಯಾಪ್ತಿಯಲ್ಲಿ ಒಟ್ಟು 2,537 ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು, 3,072 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು, 84 ಆಶ್ರಮ ಶಾಲೆಗಳು, 826 ವಸತಿ ಶಾಲೆಗಳಿದ್ದು, ವಿದ್ಯಾರ್ಥಿನಿಲಯ ಶಾಲೆಗಳಲ್ಲಿ ಪ್ರಸ್ತುತ ಸುಮಾರು 3.42ಲಕ್ಷ ವಿದ್ಯಾರ್ಥಿಗಳು ದಾಖಲಾತಿ ಹೊಂದಿದ್ದು, ಈ ಎಲ್ಲ್ಲ ವಿದ್ಯಾರ್ಥಿಗಳು ಹಾಗೂ ಇಲಾಖೆಯ 42 ಸಾವಿರ ಸಿಬ್ಬಂದಿಗಳು ಸ್ವಚ್ಛತಾ ಶ್ರಮದಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News