ನಾಗಮಂಗಲ: ಒಂದೇ ಕಾಲೇಜಿನ 27 ವಿದ್ಯಾರ್ಥಿನಿಯರಿಗೆ ಕೊರೋನ ಸೋಂಕು ದೃಢ; ಕಾಲೇಜ್ ಸೀಲ್‍ಡೌನ್

Update: 2021-09-30 15:00 GMT

ನಾಗಮಂಗಲ: ಪಟ್ಟಣದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ 27 ವಿದ್ಯಾರ್ಥಿನಿಯರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಕಾಲೇಜನ್ನು ಸೀಲ್‍ಡೌನ್ ಮಾಡಲಾಗಿದೆ.

ಈ ಬೆಳವಣಿಗೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲದೆ, ತಾಲೂಕಿನ ಜನತೆಯಲ್ಲಿ ಆಂತಕ ಉಂಟಾಗಿದೆ. ಹಾಸ್ಟೆಲ್ ವಿದ್ಯಾರ್ಥಿಗಳ ಪರೀಕ್ಷೆಗೂ ಶಾಸಕ ಕೆ.ಸುರೇಶ್‍ಗೌಡ ಸೂಚನೆ ನೀಡಿದ್ದಾರೆ.

ಕಾಲೇಜಿನ ಓರ್ವ ವಿದ್ಯಾರ್ಥಿನಿಗೆ ಕೋವಿಡ್ ಗುಣಲಕ್ಷಣಗಳು ಕಂಡುಬಂದ ಹಿನ್ನೆಲೆ ತಾಲೂಕಿನ ಬಿಂಡಿಗನವಿಲೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೆ.23 ರಂದು ಕೋವಿಡ್ ಪರೀಕ್ಷೆ  ನಡೆಸಿದಾಗ  ಸೋಂಕು ದೃಢಪಟ್ಟಿತ್ತು. ಇದರಿಂದ ಎಚ್ಚೆತ್ತುಕೊಂಡ ನಾಗಮಂಗಲ ಆರೋಗ್ಯ ಇಲಾಖೆ ಕಾಲೇಜಿನ 417 ವಿದ್ಯಾರ್ಥಿನಿಯರನ್ನು ಪರೀಕ್ಷೆಗೆ ಒಳಪಡಿಸಿತ್ತು.

ವಿದ್ಯಾರ್ಥಿಗಳ ಜತೆಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ವರದಿ ಬಂದಿದ್ದು, ವಿದ್ಯಾರ್ಥಿನಿಯರ ಪೈಕಿ  27 ವಿದ್ಯಾರ್ಥಿನಿಯರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ನಾಗಮಂಗಲ ಪಟ್ಟಣವೂ ಸೇರಿದಂತೆ  ಕರಡಹಳ್ಳಿ, ಗುಳಕಾಯಿ ಹೊಸಹಳ್ಳಿ, ಬೋಗಾದಿ, ಗಂಗವಾಡಿ, ಕನಗೋನಹಳ್ಳಿ, ಯಗಟಹಳ್ಳಿ ಬೊಮ್ಮನಾಯಕನಹಳ್ಳಿ,  ಭೀಮನಹಳ್ಳಿ ಗ್ರಾಮಗಳ  ವಿದ್ಯಾರ್ಥಿನಿಯರಲ್ಲಿ ಸೊಂಕು ಧೃಡಪಟ್ಪಿರುವುದು ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಕಾಲೇಜ್ ಸೀಲ್ ಡೌನ್ ಮಾಡಿದ್ದು, ಸೋಂಕಿತ  ವಿದ್ಯಾರ್ಥಿನಿಯರಿಗೆ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಕಾಲೇಜಿಗೆ ತಹಸೀಲ್ದಾರ್ ಕುಂಞಿ ಅಹಮದ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನೆಯಲ್ಲಿಯೇ ಹೋಂ ಐಸೋಲೇಷನ್‍ನಲ್ಲಿರುವಂತೆ ಉಳಿದ ಎಲ್ಲ ವಿದ್ಯಾರ್ಥಿನಿಯರಿಗೆ ಸೂಚನೆ ನೀಡಿದ್ದಾರೆ.

ಶಾಸಕ ಸುರೇಶ್ ಗೌಡ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಯೋಗಕ್ಷೇಮ ವಿಚಾರಿಸಿದರು. ನಂತರ ಮಾತನಾಡಿದ ಶಾಸಕ ಕೆ.ಸುರೇಶ್‍ಗೌಡ, ಈ ಬೆಳವಣಿಗೆ ಆತಂಕ ಹೆಚ್ಚಿಸಿದೆ. ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಎಲ್ಲ ಹಾಸ್ಟೆಲ್, ವಸತಿ ಶಾಲೆ ಹಾಗೂ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News