ಲಕ್ಷ್ಮೀ ಹೆಬ್ಬಾಳ್ಕರ್ ಗೆ ರಾತ್ರಿ ರಾಜಕೀಯ ಚೆನ್ನಾಗಿ ಗೊತ್ತು: ಸಂಜಯ ಪಾಟೀಲ್ ವಿವಾದಾತ್ಮಕ ಹೇಳಿಕೆ

Update: 2021-09-30 15:14 GMT
ಸಂಜಯ ಪಾಟೀಲ್( Photo:thequint.com)

ಬೆಳಗಾವಿ, ಸೆ.30: ರಾತ್ರಿ ರಾಜಕೀಯ ಚೆನ್ನಾಗಿ ಅರಿತಿದ್ದರಿಂದಲೇ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಇಲ್ಲದಿದ್ದರೆ ಅವರು ಶಾಸಕಿ ಆಗುವುದಕ್ಕೆ ಸಾಧ್ಯವಿರಲಿಲ್ಲ ಎಂದು ಬೆಳಗಾವಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ್ ಹೇಳಿದ್ದಾರೆ. 

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಸ್ತೆ ಗುಂಡಿ ವಿವಾದ ರಾಜಕೀಯ ತಿರುವು ಪಡೆದಿದ್ದು, ಈ ಕುರಿತು ಗುರುವಾರ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮಾಜಿ ಶಾಸಕ ಸಂಜಯ ಪಾಟೀಲ್ ವಾಗ್ದಾಳಿ ನಡೆಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. 

ಹೆಬ್ಬಾಳ್ಕರ್ ಅವರು ಚುನಾವಣೆಗೆ ಮೊದಲು, ನಾನು ನಿಮ್ಮ ಮನೆ ಮಗಳು ಎಂದೆಲ್ಲಾ ಹೇಳಿ ಮತದಾರರಲ್ಲಿ ಬಹುದೊಡ್ಡ ಕನಸುಗಳನ್ನು ತೋರಿಸಿದ್ದರು. ಆ ಯಾವುದೇ ಕನಸುಗಳು ನನಸಾಗಲಿಲ್ಲ. ರಾತ್ರಿ ರಾಜಕೀಯ ಮಾಡುವುದು ಬಿಜೆಪಿ ಸಂಸ್ಕೃತಿಯಲ್ಲ. ಅದು ಕಾಂಗ್ರೆಸ್‍ನವರ ಸಂಸ್ಕೃತಿಯಾಗಿದೆ. ಅಲ್ಲದೆ, ಕ್ಷೇತ್ರದಲ್ಲಿ ಅವರು ಹೇಳುತ್ತಿರುವ ಅಭಿವೃದ್ಧಿ ಹೊಳೆ ಎಲ್ಲಿದೆ ಎನ್ನುವುದನ್ನು ಹೇಳಿದರೆ ನಾನೂ ನೋಡಿಕೊಂಡು ಬರುತ್ತೇನೆ ಎಂದು ಟೀಕಿಸಿದರು.

ಯಾವಾಗಲೂ ಸುಳ್ಳು ಹೇಳುವ ಹೆಬ್ಬಾಳ್ಕರಗೆ ಸತ್ಯ ಒಪ್ಪಿಕೊಳ್ಳುವುದಕ್ಕೆ ಆಗುತ್ತಿಲ್ಲ. ಅವರು ಕೆಲಸ ಮಾಡೇ ಇಲ್ಲ ಎಂದು ಹೇಳಲಾಗುವುದಿಲ್ಲ. ಸಂವಿಧಾನದ ಪ್ರಕಾರ ಶಾಸಕರ ನಿಧಿಯಲ್ಲಿ ಒಂದಷ್ಟು ಕೆಲಸಗಳು ಸಹಜವಾಗಿಯೇ ನಡೆಯುತ್ತವೆ. ಅಭಿವೃದ್ಧಿಯ ಹೊಳೆ ಹರಿಯುತ್ತಿದ್ದರೆ, ಜನರು ಅವರ ವಿರುದ್ಧವಾಗಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಅವರನ್ನು ಟೀಕಿಸಿ ಅಲ್ಲಲ್ಲಿ ಬ್ಯಾನರ್ ಹಾಕುತ್ತಿರಲಿಲ್ಲ. ಮರಾಠಿ ಜನ ಬ್ಯಾನರ್ ಹಾಕಿದ್ದಾರೆ. ಬಿಜೆಪಿಯವರು ಅಂಥ ಅಸಹ್ಯ ರಾಜಕೀಯ ಮಾಡುವುದಿಲ್ಲ. ಅಭಿವೃದ್ಧಿ ತೆಗೆದುಕೊಂಡು ಮತದಾರರ ಬಳಿಗೆ ಹೋಗುವ ಪಕ್ಷ ನಮ್ಮದು ಎಂದರು.

ಜನರು ಮಾಡುತ್ತಿರುವ ಆರೋಪಗಳನ್ನು ಸಹಿಸಿಕೊಳ್ಳಲಾಗದೆ, ಶಾಸಕರು ಬಿಜೆಪಿ ವಿರುದ್ಧ ಸಿಟ್ಟು ತೋರಿಸುತ್ತಿದ್ದಾರೆ. ಅಭಿವೃದ್ಧಿಯ ರಾಣಿ ಎಂದು ಸ್ವಯಂಘೋಷಣೆ ಮಾಡಿಕೊಳ್ಳುವವರಿಗೆ ನಾವೇನೂ ಪ್ರತಿಕ್ರಿಯೆ ನೀಡಲಾಗುವುದಿಲ್ಲ. ಚುನಾವಣೆ ಬಂದಾಗ, ಎಲ್ಲವನ್ನೂ ಜನರು ನಿರ್ಧರಿಸುತ್ತಾರೆ ಎಂದು ಹೇಳಿದರು.

ನಾನು ಈ ಹಿಂದೆ ಮಾಡಿಸಿದ್ದ ರಸ್ತೆಯ ಮೇಲೆಯೇ ಪ್ರತಿದಿನ ಓಡಾಡುತ್ತಾರೆ. ಆದರೆ, ಹಿಂದಿನ ಶಾಸಕರು ಏನನ್ನೂ ಮಾಡಿಲ್ಲ ಎಂದು ಶಾಸಕಿ ಆರೋಪಿಸುತ್ತಾರೆ. ನಾನು ಅವರಂತೆ ಟೀಕಿಸಲು ಹೋಗುವುದಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News