ಕಾಂಗೊ: ಮಾನವ ಹಕ್ಕು ಉಲ್ಲಂಘನೆ ಪ್ರಕರಣ ತೀವ್ರ ಹೆಚ್ಚಳ; ವಿಶ್ವಸಂಸ್ಥೆ ಆತಂಕ

Update: 2021-09-30 16:41 GMT

ಕಿನ್ಶಸ, ಸೆ.30: ಕಾಂಗೊ ಗಣರಾಜ್ಯದ ಪೂರ್ವ ಪ್ರಾಂತ್ಯದಲ್ಲಿ ವಿಚಾರಣೆಯಿಲ್ಲದೆ ಬಂಧಿತರನ್ನು ಹತ್ಯೆ ಮಾಡುವ ಪ್ರಕರಣಗಳಲ್ಲಿ ತೀವ್ರ ಹೆಚ್ಚಳವಾಗಿದ್ದು, ಕಳೆದ 1 ತಿಂಗಳಲ್ಲೇ ಮಾನವಹಕ್ಕು ಉಲ್ಲಂಘನೆಯ 739 ಗಂಭೀರ ಪ್ರಕರಣ ವರದಿಯಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. 

ಬಂಡುಕೋರರ ತಂಡ ಮಾತ್ರವಲ್ಲ, ಭದ್ರತಾ ಪಡೆಗಳೂ ಮಾನವಹಕ್ಕು ಉಲ್ಲಂಘನೆಯ ಆರೋಪ ಎದುರಿಸುತ್ತಿವೆ. ಜುಲೈಯಲ್ಲಿ ಮಾನವಹಕ್ಕು ಉಲ್ಲಂಘನೆಯ 492 ಪ್ರಕರಣ ದಾಖಲಾಗಿದ್ದರೆ ಆಗಸ್ಟ್ ನಲ್ಲಿ ಇದು 739ಕ್ಕೇರಿದೆ ಎಂದು ಕಾಂಗೊ ಗಣರಾಜ್ಯದ ರಾಜಧಾನಿ ಕಿನ್ಶಾಸದಲ್ಲಿ ಬುಧವಾರ ನಡೆಸಿದ ಸುದ್ಧಿಗೋಷ್ಟಿಯಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ನಿಯೋಗ ‘ಮೊನುಸ್ಕೊ’ದ ಸದಸ್ಯರು ಹೇಳಿದ್ದಾರೆ.
 
 ಈ ಪ್ರಕರಣಗಳಲ್ಲಿ 63 ಮಹಿಳೆಯರು, 24 ಮಕ್ಕಳ ಸಹಿತ ಕನಿಷ್ಟ 293 ನಾಗರಿಕರು ಮೃತಪಟ್ಟಿದ್ದಾರೆಂದು ಕಾಂಗೋದಲ್ಲಿರುವ ವಿಶ್ವಸಂಸ್ಥೆಯ ಜಂಟಿ ಮಾನವಹಕ್ಕು ಸಂಸ್ಥೆ(ಯು ಎನ್ ಜೆಎಚ್ ಆರ್ ಒ) ದಾಖಲಿಸಿರುವ ಅಂಕಿಅಂಶಗಳು ತಿಳಿಸಿವೆ. ಇದರಲ್ಲಿ ಶೇ. 94 ಪ್ರಕರಣಗಳು ಸಂಘರ್ಷಪೀಡಿತ ಉತ್ತರ ಕಿವು ಮತ್ತು ಇಟುರಿ ಪ್ರಾಂತ್ಯಗಳಲ್ಲಿ ವರದಿಯಾಗಿವೆ. ಈ ಪ್ರಾಂತ್ಯಗಳಲ್ಲಿ ಕಳೆದ ಸುಮಾರು 25 ವರ್ಷಗಳಿಂದ ಸಕ್ರಿಯವಾಗಿರುವ ಸಶಸ್ತ್ರ ಹೋರಾಟಗಾರರ ಗುಂಪನ್ನು ನಿಯಂತ್ರಿಸಲು ಮೇ ತಿಂಗಳಿಂದ ಸೇನಾ ದಿಗ್ಬಂಧನ ವಿಧಿಸಲಾಗಿದೆ. 

ಇದರಿಂದ ಹಲವು ಉನ್ನತ ಆಡಳಿತ ಹುದ್ದೆಗಳು ಸೇನೆ ಅಥವಾ ಪೊಲೀಸರ ನಿಯಂತ್ರಣಕ್ಕೆ ಬಂದಿರುವುದರಿಂದ ಪರಿಸ್ಥಿತಿ ತುಸು ಸುಧಾರಿಸಿದೆ. ಆದರೆ ಇನ್ನೂ ಹಲವು ಸಮಸ್ಯೆಗಳು ಉಳಿದುಕೊಂಡಿವೆ . ಇರುಮು ಮತ್ತು ಜುಗು ಜಿಲ್ಲೆಗಳಲ್ಲಿ ಎಡಿಎಫ್ ಸಶಸ್ತ್ರ ಹೋರಾಟಗಾರರ ತಂಡವು ಇಲ್ಲಿನ ಜನಾಂಗೀಯ ಸಮುದಾಯಗಳನ್ನು ಪರಸ್ಪರ ಎತ್ತಿಕಟ್ಟುವ ಮೂಲಕ ಅಶಾಂತಿ ಹರಡಲು ಪ್ರಯತ್ನಿಸುತ್ತಿದೆ ಎಂದು ಯುಎನ್ಜೆಎಚ್ಆರ್ಒ ಮುಖ್ಯಸ್ಥ ಅಬ್ದುಲ್ಅಝೀಝ್ ಥಿಯೊಯೆ ಹೇಳಿದ್ದಾರೆ.
  
ದೇಶದ ಪ್ರತಿನಿಧಿಗಳು(ಭದ್ರತಾ ಪಡೆಗಳು) ಕನಿಷ್ಟ 40 ನಾಗರಿಕರ ನ್ಯಾಯಾತಿರಿಕ್ತ ಹತ್ಯೆ ಪ್ರಕರಣ ಸೇರಿದಂತೆ ಸುಮಾರು ಶೇ.55 ಪ್ರಕರಣಗಳಿಗೆ ಹೊಣೆಯಾಗಿದ್ದರೆ, ಸಶಸ್ತ್ರ ಹೋರಾಟಗಾರರು ಕನಿಷ್ಟ 253 ಹತ್ಯೆ ಪ್ರಕರಣದ ಸಹಿತ ಸುಮಾರು ಶೇ. 45 ಪ್ರಕರಣಗಳಿಗೆ ಹೊಣೆಯಾಗಿದ್ದಾರೆ ಎಂದು ಯುಎನ್ಜೆಎಚ್ಆರ್ಒ ಹೇಳಿದೆ. ಮಹಿಳೆಯರು, ಮಕ್ಕಳು ಹಾಗೂ ದುರ್ಬಲರ ಮೇಲಿನ ಮಾನವಹಕ್ಕು ದೌರ್ಜನ್ಯ ಪ್ರಕರಣಗಳ ಮೇಲುಸ್ತುವಾರಿಗೆ 2008ರಲ್ಲಿ ಯುಎನ್ಜೆಎಚ್ಆರ್ಒ ರಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News