ದತ್ತ ಪಾದುಕೆಗಳಿಗೆ ಪೂಜೆ ಸಲ್ಲಿಕೆಗೆ ಅವಕಾಶ ನೀಡದ ಜಿಲ್ಲಾಡಳಿತ: ಶ್ರೀ ರಾಮ ಸೇನೆ ಮುಖಂಡರಿಂದ ಧರಣಿ
ಚಿಕ್ಕಮಗಳೂರು: ಬಾಬಾ ಬುಡನ್‌ಗಿರಿ ದತ್ತ ಪೀಠ ವಿವಾದ ಸಂಬಂಧ ಹೈಕೋರ್ಟ್ ಹಿಂದಿನ ರಾಜ್ಯ ಸರಕಾರದ ಆದೇಶವನ್ನು ರದ್ದು ಪಡಿಸಿದ ಹಿನ್ನೆಲೆಯಲ್ಲಿ ಗುರುವಾರ ಶ್ರೀರಾಮ ಸೇನೆಯ ಮುಖಂಡರು ಕಾಳಿ ಸ್ವಾಮಿ ನೇತೃತ್ವದಲ್ಲಿ ಬಾಬಾ ಬುಡಾನ್‌ಗಿರಿಯಲ್ಲಿ ದತ್ತ ಪಾದುಕೆಗಳಿಗೆ ಪೂಜೆ ಸಲ್ಲಿಸಲು ಮುಂದಾಗಿದ್ದು, ಇದಕ್ಕೆ ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಮುಖಂಡರು ಸ್ಥಳದಲ್ಲೇ ಕೆಲಹೊತ್ತು ಧರಣಿ ನಡೆಸಿದ ಘಟನೆ ನಡೆಯಿತು.
ಕಾಳಿ ಸ್ವಾಮೀಜಿ ನೇತೃತ್ವದಲ್ಲಿ ಗುರುವಾರ ಬಾಬಾ ಬುಡಾನ್‌ಗಿರಿಗೆ ತೆರಳಿದ್ದ ಶ್ರೀರಾಮ ಸೇನೆ ಮುಖಂಡರಾದ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ರಂಜಿತ್‌ಶೆಟ್ಟಿ ಮತ್ತಿತರರು ಗುಹೆಯಲ್ಲಿರುವ ಪಾದುಕೆಗಳಿಗೆ ಪೂಜೆ ಸಲ್ಲಿಸಲು ಮುಂದಾಗಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪಾದುಕೆಗಳಿಗೆ ಪೂಜೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರು. ಅಲ್ಲದೆ ಗುಹೆ ಪ್ರವೇಶಕ್ಕೆ ಅನುಮತಿ ನಿರಾಕರಿಸಿದರು. ಈ ವೇಳೆ ಮುಖಂಡರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ ಸ್ಥಳದಲ್ಲಿ ಕೆಲ ಹೊತ್ತು ಧರಣಿ ಮಾಡಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಸ್ಥಳಕ್ಕಾಗಮಿಸಿದ ಚಿಕ್ಕಮಗಳೂರು ಕಂದಾಯ ಉಪ ವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಮುಖಂಡರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಮನವರಿಕೆ ಮಾಡುವಲ್ಲಿ ಯಶಸ್ವಿಯಾದರು. ನಂತರ ಧರಣಿ ಕೈಬಿಟ್ಟ ಮುಖಂಡರು ಹಿಂದಿರುಗಿದರೆಂದು ತಿಳಿದು ಬಂದಿದೆ.