ವಿಧಾನಸಭೆ ಉಪ ಚುನಾವಣೆ; ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಖಚಿತ: ಸಚಿವ ಸಿ.ಸಿ.ಪಾಟೀಲ್
ಬೆಂಗಳೂರು, ಅ. 1: `ವಿಧಾನಸಭೆಯ ಎರಡು ಕ್ಷೇತ್ರಗಳ ಉಪ ಚುನಾವಣೆ ಅಭ್ಯರ್ಥಿಗಳ ಬಗ್ಗೆ ಪಕ್ಷದ ಮುಖಂಡರು ಶೀಘ್ರವೇ ನಿರ್ಧರಿಸಲಿದ್ದು, ಪಕ್ಷ ನಿರ್ಧರಿಸಿದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಮಾಡಲಿದ್ದೇವೆ' ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಾನಗಲ್ ಮತ್ತು ಸಿಂಧಗಿ ಸಹಿತ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ಕೊಟ್ಟಿದ್ದೇನೆ. ರಾಜ್ಯದಲ್ಲಿ 2017ರಿಂದ ಸತತ ಪ್ರವಾಹ ಸಮಸ್ಯೆ ಕಾಡುತ್ತಿದೆ. ಹಣಕಾಸಿನ ಇತಿಮಿತಿಯಲ್ಲಿ ರಸ್ತೆಗಳ ಗುಂಡಿ ಮುಚ್ಚಲು ಆದೇಶಿಸಲಾಗಿದೆ. ಅನುದಾನ ಬಿಡುಗಡೆ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಕೋರಿದ್ದು, ಹೆಚ್ಚಿನ ಅನುದಾನದ ಭರವಸೆಯಲ್ಲಿದ್ದೇವೆ.
ಹೊಸ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದೇವೆ. ಕುಸಿದ ಸೇತುವೆಗಳ ಮರು ನಿರ್ಮಾಣ ಮಾಡುವುದು. ಜೊತೆಗೆ ಕಳಪೆ ರಸ್ತೆ ಕಾಮಗಾರಿ ನಡೆದರೆ ತನಿಖೆ ಮಾಡಿ ತಪ್ಪಿತಸ್ಥ ಗುತ್ತಿಗೆದಾರರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಸ್ಪಷ್ಟಣೆ ನೀಡಿದರು.