×
Ad

ಪಕ್ಷ ನೀಡುವ ಜವಾಬ್ದಾರಿ ನಿರ್ವಹಿಸುವೆ: ಶಾಸಕ ಎಂ.ಪಿ.ರೇಣುಕಾಚಾರ್ಯ

Update: 2021-10-01 20:23 IST

ಬೆಂಗಳೂರು, ಅ. 1: ಪಕ್ಷ ನೀಡುವ ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸಲು ಸಿದ್ಧ. ಯಾವುದೇ ಹೊಣೆ ನೀಡಿದರೂ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನಿರ್ವಹಿಸುತ್ತೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನ್ನ ಕಚೇರಿಗೆ ಬಂದು ಒಳ್ಳೆಯ ದಿನ ಬರುತ್ತದೆ ಎಂದು ಹಾರೈಸಿದ್ದಾರೆ. ಆ ಶುಭ ದಿನಕ್ಕಾಗಿ ಕಾಯುತ್ತಿರುತ್ತೇನೆ. ಬಿಎಸ್‍ವೈ ಸಿಎಂ ಆಗಿದ್ದ ವೇಳೆ ರಾಜಕೀಯ ಕಾರ್ಯದರ್ಶಿಯಾಗಿದ್ದೆ. ಈಗಲೂ ರಾಜಕೀಯ ಕಾರ್ಯದರ್ಶಿಯಾಗಿದ್ದೇನೆ. ಅದೇ ಕಚೇರಿ, ಅದೇ ಜವಾಬ್ದಾರಿಯನ್ನು ನಿರ್ವಹಿಸುವೆ ಎಂದರು.

ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪಚುನಾವಣೆ ಬಂದಿದೆ. ಇದೇ ವೇಳೆ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯೂ ಎದುರಾಗಲಿದ್ದು, ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸಿ ಪಕ್ಷದ ಗೆಲುವಿಗೆ ಶ್ರಮಿಸಲಾಗುವುದು ಎಂದ ಅವರು, ವರಿಷ್ಠರ ಸೂಚನೆಯಂತೆ ಪಕ್ಷದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದರು.

ಯಡಿಯೂರಪ್ಪನವರು ನಮ್ಮ ನಾಯಕರು ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ಹೀಗಾಗಿ ಆ ವಿಚಾರದಲ್ಲಿ ನಾನು ಬೇರೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ರೇಣುಕಾಚಾರ್ಯ ಇದೇ ಸಂದರ್ಭದಲ್ಲಿ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News