×
Ad

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಅಂಬೇಡ್ಕರ್ ಕಂಡ ಕನಸು ಭಗ್ನ: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2021-10-01 21:13 IST

ಮೈಸೂರು,ಅ.1: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಸಾಮಾಜಿಕ ಮತ್ತು ನ್ಯಾಯಪರವಾಗಿಲ್ಲದೆ ಸಂವಿಧಾನದ ಆಶಯಕ್ಕ ವಿರುದ್ಧವಾಗಿದ್ದು ಅಂಬೇಡ್ಕರ್ ಕಂಡ ಕನಸನ್ನು ಭಗ್ನ ಮಾಡುವ ನೀತಿಯಾಗಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಿಡಿಕಾರಿದರು.

ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಶುಕ್ರವಾರ ಮೈಸೂರು ವಿವಿ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ಒಕ್ಕೂಟ, ಭಾರತೀಯ ವಿದ್ಯಾರ್ಥಿ ಸಂಘ ಸಂಯುಕ್ತಾಶ್ರಯದಲ್ಲಿ “ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020- ಒಂದು ಅವಲೋಕನ” ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಅರಳಿ ಗಿಡಕ್ಕೆ ನಿರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

ಸಾಮಾಜಿಕ ನ್ಯಾಯ, ಸಂವಿಧಾನದ ಆಶಯಗಳೊಳಗೊಂಡಂತ ಎಲ್ಲರಿಗೂ ಸಮಾನ ಶಿಕ್ಷಣ ದೊರಕಬೇಕು ಎಂಬುದು ಅಂಬೇಡ್ಕರ್ ಕನಸಾಗಿತ್ತು, ಆದರೆ ನೂತನ ಶಿಕ್ಷಣ ನೀತಿ ಅದಕ್ಕೆ ವಿರುದ್ಧವಾಗಿದ್ದು, ಹಣವಿದ್ದವರಿಗೆ ಮಾತ್ರ ಶಿಕ್ಷಣ ಎಂಬಂತಾಗಿದೆ. ಈ ಶಿಕ್ಷಣ ನೀತಿಯಿಂದ ಬಲಿಷ್ಠ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲವಾಗಲಿದಿಯೇ ಹೊರತು ಬಡವರಿಗಲ್ಲ ಎಂದು ಟೀಕಿಸಿದರು.

1968ರಲ್ಲಿ ರಾಧಾಕೃಷ್ಣನ್ ಅವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ ರಾಜಕೀಯ, ಸಾಮಾಜಿಕ ನ್ಯಾಯ ಹಾಗೂ ಶಿಕ್ಷಣ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅನುಗುಣವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದ್ದರು. ಅಂದು ಶಿಕ್ಷಣ ತಜ್ಞರು, ಸಾಹಿತಿ, ಬುದ್ಧಿಜೀವಿಗಳನ್ನು ಒಳಗೊಂಡ 2400 ಮಂದಿಯ ತಜ್ಞರು ಹಾಗೂ ವಿದೇಶಿ ಶಿಕ್ಷಣ ತಜ್ಞರೊಳಗೊಂಡು ಅಭಿಪ್ರಾಯ ಸಂಘ್ರಹಿಸಿ ನೀತಿ ರೂಪಿಸಲಾಗಿತ್ತು. ಆದರೆ ಈಗ ಜಾರಿ ಮಾಡಿರುವ ಶಿಕ್ಷಣ ನೀತಿಯಲ್ಲಿ ದಲಿತ, ಹಿಂದುಳಿದ, ರೈತ, ನಮ್ನ ವರ್ಗಕ್ಕೆ ಸೇರಿದವರು ಉನ್ನತ ಶಿಕ್ಷಣ ಪಡೆಯುವ ಅರ್ಹತೆಯನ್ನೇ ಕಸಿದುಕೊಳ್ಳುವ ವ್ಯವಸ್ಥಿತ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದ ರಾಧಾಕೃಷ್ಣನ್, ಕೊಠಾರಿ ಆಯೋಗದ ನೇತೃತ್ವದಲ್ಲಿ ಎಲ್ಲರಿಗೂ ಒಳಗೊಂಡ ಶಿಕ್ಷಣ ನೀತಿ ರೂಪಿಸಲಾಗಿತ್ತು. ಆದರೆ ಮೋದಿ, ಸರ್ಕಾರದ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಸಮಿತಿ ಮಾಡಿ ಅವರಿಗೊಬ್ಬ ಸಹಾಯಕ ಕಾರ್ಯದರ್ಶಿ ನೇಮಿಸಿ ಕೇವಲ 6 ತಿಂಗಳಲ್ಲೇ ವರದಿ ತಯಾರಿಸಿತ್ತು. ಇದು ಸಮರ್ಪಕವಾಗಿಲ್ಲ ಎಂದು ಕಸ್ತೂರಿ ರಂಗನ್ ನೇತೃತ್ವದಲ್ಲಿ ಸಮಿತಿ ರಚಿಸಿ ಅಂತರಾಳದದಲ್ಲಿ ಚರ್ಚೆ ನಡೆಸದೆ ಕೇವಲ 6 ತಿಂಗಳಲ್ಲಿ  ವರದಿಯನ್ನು ನೀಡಿದೆ ಎಂದು ಹರಿಹಾಯ್ದರು.

ಲೋಕಸಭೆಯಲ್ಲಿ ಚರ್ಚೆ ನಡೆಸದೆ ತಮ್ಮ ಇಚ್ಛೆಗೆ ಅನುಸರಾವಾಗಿ ಶಿಕ್ಷಣ ನೀತಿ ಜಾರಿ ಮಾಡಲಾಗಿದೆ. ಈ ಶಿಕ್ಷಣ ನೀತಿಯಿಂದ ಶಿಕ್ಷಣ ತಜ್ಞರು, ಬೋಧಕವರ್ಗ ಎಲ್ಲರೂ ಆಘಾತಗೊಂಡಿದ್ದಾರೆ. ಒಂದು ರೀತಿಯಲ್ಲಿ ಶೇ.1 ಅಥವಾ 2ರಷ್ಟಿರುವ ಸಮುದಾಯಕ್ಕೋಸ್ಕರ ಶಿಕ್ಷಣ ನೀತಿ ರೂಪಿಸಿದಂತಿದೆ. ಈ ಶಿಕ್ಷಣ ನೀತಿಯಿಂದ ಉನ್ನತ ವ್ಯಾಸಂಗ ಮಾಡಲು ಸಾಧ್ಯವಿಲ್ಲ. ಮುಂದೆ ಅವರು ಉದ್ಯೋಗದಿಂದಲೂ ವಂಚಿತರಾಗುತ್ತಾರೆ. ಯಾವುದೇ ಚರ್ಚೆ ಅಥವಾ ಸಂವಾದ ನಡೆಸದೇ ಏಕಾಎಕಿ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ ಎಂದು ಆರೋಪಿಸಿದರು.  

ಆರೆಸ್ಸೆಸ್ ಮಿತ್ರ ಮಂಡಳಿಗಳ ಒಪ್ಪಿಗೆ ಪಡೆದು ಹಾಗೂ ಅವರಿಗೋಸ್ಕರವೇ ಈ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಹಾಗಾಗಿ ಸಂಘಟಿತ ಹೋರಾಟ ರೂಪಿಸಿ ಎಲ್ಲರೂ ಈ ಶಿಕ್ಷಣ ನೀತಿಯನ್ನು ವಿರೋಧಿಸಬೇಕಿದೆ ಎಂದು ಕರೆ ನೀಡಿದರು.  

ಶಿಕ್ಷಣ ತಜ್ಞ ಶ್ರೀಪಾದಭಟ್, ಅಕ್ಕಾ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಜವರಯ್ಯ, ಸಂಶೋಧಕರ ಸಂಘದ ಅಧ್ಯಕ್ಷ ಮಹೇಶ್ ಸೊಸ್ಲೆ ಉಪಸ್ಥಿತರಿದ್ದರು,  ಶಾಲಿನಿ ನಿರೂಪಿಸಿದರೆ, ಪ್ರದೀಪ್ ರಾಜ್ ಸ್ವಾಗತಿಸಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು, ದಲಿತರು ಹಿಂದುಳಿದವರು ಅಲ್ಪಸಂಖ್ಯಾತರೂ ಸೇರಿದಂತೆ ತಳ ಸಮುದಾಯಗಳು ಉನ್ನತ ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಸಂವಿಧಾನಯ ಮೂಲ ಆಶಯಕ್ಕೆ ಧಕ್ಕೆ ತರುವ ಎಲ್ಲಾ ಅಂಶಗಳು ಇದರಲ್ಲಿ ಒಳಗೊಂಡಿವೆ. ಈ ಶಿಕ್ಷಣ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ.
 -ಡಾ.ಎಚ್.ಸಿ.ಮಹದೇವಪ್ಪ,
  ಮಾಜಿ ಸಚಿವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News