ಸಂಜಯ್ ಪಾಟೀಲ್ ಇತಿಹಾಸದ ಪುಟ ತಿರುವಿ ನೋಡಲಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು
ಬೆಳಗಾವಿ, ಅ.1: ಹೆಣ್ಣಿನ ಬಗ್ಗೆ ಹಗುರವಾಗಿ ಮಾತನಾಡಿದವರ ಪರಿಸ್ಥಿತಿ ಏನಾಗಿದೆ ಅನ್ನೋದನ್ನು ಬಿಜೆಪಿಯ ಮಾಜಿ ಶಾಸಕ ಸಂಜಯ್ ಪಾಟೀಲ್ ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ನೋಡಲಿ ಎಂದು ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಜಯ್ ಪಾಟೀಲ್ ಅಣ್ಣ ನೀಡಿರುವ ಹೇಳಿಕೆ ಬಗ್ಗೆ ಈಗಾಗಲೆ ನಮ್ಮ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಜನ ಪ್ರತಿಕ್ರಿಯಿಸುತ್ತಿದ್ದಾರೆ. ಆದುದರಿಂದ, ನಾನು ಅವರ ಹೇಳಿಕೆ ಕುರಿತು ಯಾವುದೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ನಮ್ಮ ಪಕ್ಷದ ನಾಯಕರು, ಮುಖಂಡರು ಈಗಾಗಲೆ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆಗಳನ್ನು ಕೊಟ್ಟಿದ್ದಾರೆ. ಸಂಜಯ್ ಪಾಟೀಲ್ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ಅಂತಹ ಹೇಳಿಕೆ ನೀಡಿದ್ದಾರೋ ಅಥವಾ ವೈಯಕ್ತಿಕವಾಗಿ ಹೇಳಿದ್ದಾರೋ ಅನ್ನೋದು ನನಗೆ ಗೊತ್ತಿಲ್ಲ. ಈ ಬಗ್ಗೆ ಅವರ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಪಪಡಿಸಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಸಂಜಯ್ ಪಾಟೀಲ್ ನನಗಿಂತ 10 ವರ್ಷ ಮುಂಚೆ ಈ ಕ್ಷೇತ್ರದ ಶಾಸಕರಾಗಿದ್ದವರು. ಅವರಿಗಿಂತ ಮುನ್ನ ಮನೋಹರ್ ಕಡೋಲ್ಕರ್, ಅಭಯ್ ಪಾಟೀಲ್ ಶಾಸಕರಾಗಿದ್ದರು. ಅವರ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ. ಆದರೆ, ಎರಡು ಬಾರಿ ಗೆದ್ದಂತಹ ಸಂಜಯ್ ಪಾಟೀಲ್ ಮಾಡಿರುವ ಅಭಿವೃದ್ಧಿಯಾದರೂ ಏನು? ಎಂದು ಅವರು ಪ್ರಶ್ನಿಸಿದರು.
2023ರ ಚುನಾವಣೆಗೆ ನಾನು ಕಾತುರದಿಂದ ಕಾಯುತ್ತಿದ್ದೇನೆ. ನನ್ನ ಕ್ಷೇತ್ರದ ಮತದಾರರು, ನಮ್ಮ ಪಕ್ಷದ ಮುಖಂಡರು ಅವರಿಗೆ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ. ನನ್ನ ವಿರುದ್ಧ ಅವರು ಸ್ಪರ್ಧಿಸುವುದಾದರೆ ಸಂತೋಷದಿಂದ ಎದುರಿಸುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ನನ್ನ ವಿರುದ್ಧ ಐಟಿ, ಈ.ಡಿ.ಗೆ ಪತ್ರ ಬರೆದು ನನ್ನ ಮೇಲೆ ದಾಳಿ ಮಾಡಿಸಿದರು. ಆದರೂ, ಜನ ನನ್ನನ್ನು ಆಯ್ಕೆ ಮಾಡಿದ್ದರಿಂದ ಶಾಸಕಿಯಾದೆ. ಈಗ ನನ್ನ ವಿರುದ್ಧ ಈ ರೀತಿಯಾಗಿ ಮಾತನಾಡಿದ್ದಾರೆ. ಮುಂದಿನ ಬಾರಿ ಜನತೆಯ ಆಶೀರ್ವಾದದಿಂದ ಮಂತ್ರಿಯೂ ಆಗುತ್ತೇನೆ ಎಂದು ಅವರು ತಿಳಿಸಿದರು.
ಸಂಜಯ್ ಪಾಟೀಲ್ ಅಣ್ಣಾ, ನಿನಗೆ ಹೆಂಡತಿ, ಮಗಳು, ತಾಯಿ, ಅಕ್ಕ, ತಂಗಿಯರಿದ್ದಾರೆ. ನೀನು ನೀಡಿರುವ ಹೇಳಿಕೆ ನನಗಲ್ಲ. ನೀನು ಆಡಿರುವ ಮಾತಿನ ಬಗ್ಗೆ ಒಮ್ಮೆ ವಿಮರ್ಶೆ ಮಾಡಿಕೋ.
-ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್ ಶಾಸಕಿ