×
Ad

ರಾಜ್ಯದ ಅರಣ್ಯ ಶೇ.30ರಷ್ಟು ಹೆಚ್ಚಿಸುವ ಗುರಿ: ಸಚಿವ ಉಮೇಶ್ ಕತ್ತಿ

Update: 2021-10-02 17:42 IST
ಸಚಿವ ಉಮೇಶ್ ಕತ್ತಿ

ಬೆಂಗಳೂರು, ಅ. 2: `ಕರ್ನಾಟಕದಲ್ಲಿ ಪ್ರಸ್ತುತ ಶೇ.20ರಷ್ಟು ಅರಣ್ಯ ಪ್ರದೇಶವಿದ್ದು, ಈ ಪ್ರಮಾಣ ಶೇ.30ಕ್ಕೆ ಹೆಚ್ಚಿಸುವ ಗುರಿಯನ್ನಿಟ್ಟುಕೊಂಡಿದ್ದು, ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ' ಎಂದು ಅರಣ್ಯ ಮತ್ತು ಆಹಾರ, ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಕಬ್ಬನ್ ಪಾರ್ಕ್‍ನಲ್ಲಿ ಆಯೋಜಿಸಲಾಗಿದ್ದ 67ನೆ ವನ್ಯಜೀವಿ ಸಪ್ತಾಹದ ಅಂಗವಾಗಿ `ವನ್ಯಜೀವಿ ಸಂರಕ್ಷಣೆಗಾಗಿ ನಡಿಗೆ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ವನ್ಯಜೀವಿ ಹಾಗೂ ಕಾಡಿನ ರಕ್ಷಣೆಯ ಬಗ್ಗೆ ನಮ್ಮಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಬೇಕಿದೆ. ಕಾಡು ಉಳಿದರೆ ಮಾತ್ರ ನಾವು ನೆಮ್ಮದಿಯಿಂದ ಇರುವುದಕ್ಕೆ ಸಾಧ್ಯ. ಕರ್ನಾಟಕ ಗಂಧದ ನಾಡು ಎಂಬ ಕೀರ್ತಿ ಹೊಂದಿದೆ. ಇದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅರಣ್ಯ ಇಲಾಖೆಯು ಕರ್ನಾಟಕವನ್ನು ಬರುವ ದಿನಗಳಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಿದೆ' ಎಂದು ಹೇಳಿದರು.

`ಯುಗ, ಯುಗಗಳಿಂದ ಮಾನವ ವನ್ಯಜೀವಿಗಳ ಜೊತೆಗೆ ಸೌಹಾರ್ದ ಬಾಂಧವ್ಯವನ್ನು ಬೆಳೆಸಿಕೊಂಡೆ ಬಂದಿದ್ದಾನೆ. ಇಂದು ವನ್ಯಜೀವಿಗಳ ರಕ್ಷಣೆ ಅಗತ್ಯವಾಗಿದೆ. ವನ್ಯಜೀವಿಗಳ ಸಂರಕ್ಷಣೆಗೆ ಕಾಡು ಸುರಕ್ಷಿತವಾಗಿರಬೇಕು. ಆಗ ಮಾತ್ರ ನಮಗೆಲ್ಲಾ ಶುದ್ಧ ಗಾಳಿ, ಆಹಾರ, ನೀರು ಸಿಗುವುದಕ್ಕೆ ಸಾಧ್ಯ. ಆಯುರ್ವೇದದಲ್ಲಿ ಅರಣ್ಯದಲ್ಲಿ ಸಿಗುವ ವಿವಿಧ ಸಸ್ಯ ಸಂಕುಲ, ಹೂವು, ಹಣ್ಣುಗಳಲ್ಲಿರುವ ಔಷಧ ಗುಣಗಳ ಬಗ್ಗೆ ಮಹತ್ವ ತಿಳಿಸಲಾಗಿದೆ.

ಅರಣ್ಯವನ್ನ ಪೂಜಿಸುವ ಸಂಪ್ರದಾಯ ಕಾಲ, ಕಾಲದಿಂದಲೂ ನಮ್ಮಲ್ಲಿ ಜಾರಿಯಲ್ಲಿದೆ. ವನ್ಯಜೀವಿ ಸಂರಕ್ಷಣಾ ಅಧಿನಿಯಮದ ಮೂಲಕ ವನ್ಯಜೀವಿಗಳ ರಕ್ಷಣೆಗೆ ಕಠಿಣ ಕಾನೂನುಗಳನ್ನು ರೂಪಿಸಲಾಗಿದೆ. ಹಲವು ಯೋಜನೆಗಳ ಮೂಲಕ ಅರಣ್ಯ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ಅರಣ್ಯ ಇಲಾಖೆಯು ವನ ಹಾಗೂ ವನ್ಯಜೀವಿ ಸಂರಕ್ಷಣೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ' ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಳಿವಿನ ಅಂಚಿನಲ್ಲಿರುವ `ಮೀನಿನ ವಿಶೇಷ ಅಂಚೆ ಲಕೋಟೆ'ಯನ್ನು ಬಿಡುಗಡೆ ಮಾಡಲಾಯಿತು. ಆ ನಂತರ ವನ್ಯಜೀವಿ ಸಂರಕ್ಷಣೆ ಕುರಿತಂತೆ ಜಾಗೃತಿ ಮೂಡಿಸಲು ಕಬ್ಬನ್ ಪಾರ್ಕ್‍ನಿಂದ ಲಾಲ್‍ಬಾಗ್‍ವರೆಗಿನ ನಡಿಗೆಗೆ ಹಸಿರು ನಿಶಾನೆ ತೋರಿಸಲಾಯಿತು. ಶಾಸಕ ರಿಝ್ವಾನ್ ಅರ್ಶದ್, ಕೇಂದ್ರ ಸಂಸದ ಪಿ.ಸಿ.ಮೋಹನ್, ಜಂಟಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಸೇರಿದಂತೆ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News