ಕಾಂಗ್ರೆಸ್ ಸೋಲಿಸಲು ಜೆಡಿಎಸ್‍ನಿಂದ ಮುಸ್ಲಿಮ್ ಅಭ್ಯರ್ಥಿಗಳು ಕಣಕ್ಕೆ: ಸಿದ್ದರಾಮಯ್ಯ ಆರೋಪ
ಬೆಂಗಳೂರು, ಅ.2: ಉಪ ಚುನಾವಣೆ ಘೋಷಣೆಯಾಗಿರುವ ಹಾನಗಲ್ ಹಾಗೂ ಸಿಂಧಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ, ಬಿಜೆಪಿಗೆ ಅನುಕೂಲ ಮಾಡಲು ಜೆಡಿಎಸ್‍ನಿಂದ ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಕಲ್ಯಾಣದಲ್ಲಿ ನಡೆದ ಉಪ ಚುನಾವಣೆಯಲ್ಲೂ ಜೆಡಿಎಸ್‍ನವರು ಅದನ್ನೇ ಮಾಡಿದರು. ಮುಸ್ಲಿಮರ ಬಗ್ಗೆ ಕಾಳಜಿ ಇದ್ದಿದ್ದರೆ ಅವರ ಸಂಪುಟದಲ್ಲಿ ಯಾಕೆ ಯಾರಿಗೂ ಅವಕಾಶ ಕೊಟ್ಟಿರಲಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ಯಾಕೆ ಟಿಕೆಟ್ ಕೊಡಲ್ಲ. ಬಿಜೆಪಿಗೆ ಅನುಕೂಲ ಮಾಡಲು ಉತ್ತರ ಕರ್ನಾಟಕ ಭಾಗದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಹಾಕುತ್ತಾರೆ. ಅವರದ್ದು ಒಂದು ರಾಜಕೀಯ ಪಕ್ಷ. ರಾಜಕೀಯ ತಂತ್ರಗಾರಿಕೆಯನ್ನು ಅವರು ಮಾಡುತ್ತಿರಬಹುದು. ನಾನು ಅದರ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲ್ಲ. ಅಲ್ಲದೆ, ಕುಮಾರಸ್ವಾಮಿ ಹೇಳಿಕೆಗಳಿಗೆ ಯಾವುದೆ ಪ್ರತಿಕ್ರಿಯೆ ಕೊಡಬಾರದು ಎಂದುಕೊಂಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ನನ್ನ ಬಗ್ಗೆ ಮತ್ತು ಜೆಡಿಎಸ್ ಬಗ್ಗೆ ಮಾತನಾಡಬೇಡಿ ಎಂಬ ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನ್ನ ರಾಜಕೀಯ ಜೀವನದಲ್ಲಿ ಇಂತಹ ಎಚ್ಚರಿಕೆಗಳನ್ನು ಬಹಳ ನೋಡಿದ್ದೇನೆ ಎಂದರು.
ಹಾನಗಲ್ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂಬುದರ ಬಗ್ಗೆ ಹಾವೇರಿ ಜಿಲ್ಲೆಯ ಮುಖಂಡರ ಜತೆ ಚರ್ಚೆ ಮಾಡಿದ್ದೇವೆ. ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಹಾಗೂ ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಇಬ್ಬರು ಆಕಾಂಕ್ಷಿಗಳಾಗಿದ್ದಾರೆ. ಇಬ್ಬರ ನಡುವೆ ಸ್ಪರ್ಧೆ ಇದೆ. ಎಲ್ಲ ಮುಖಂಡರ ಎಲ್ಲರ ಅಭಿಪ್ರಾಯ ಕೇಳಿದ್ದೇವೆ. ನಾವು ಯಾರಿಗೆ ಕೊಟ್ಟರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದೇವೆ. ಇಬ್ಬರು ಇದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಎರಡು ಮೂರು ದಿನಗಳಲ್ಲಿ ಹೈಕಮಾಂಡ್ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸುತ್ತದೆ. ಅ.7ರಂದು ಹಾನಗಲ್ ಹಾಗೂ ಅ.8ರಂದು ಸಿಂಧಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ನಾನು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರೂ ನಾಮಪತ್ರ ಸಲ್ಲಿಕೆ ವೇಳೆ ಜೊತೆಯಲ್ಲಿ ಇರುತ್ತೇವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿ ಆಗಬಹುದು ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೀಡಿರುವ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಬಗ್ಗೆ ನಾನು ಏನು ಮಾತನಾಡಲ್ಲ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತೋ ಅದಕ್ಕೆ ಬದ್ಧ ಎಂದರು.
ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಎಲ್ಲವೂ ಅನುಭವ ಇದೆ. ಅವರಿಗೆ ಏನು ಮಾತನಾಡಬೇಕು, ಏನು ಮಾತನಾಡಬಾರದು ಅಂತ ಗೊತ್ತಿದೆ. ಮುಖ್ಯಮಂತ್ರಿ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಉಪ ಚುನಾವಣೆ ನಡೆಯಲಿರುವ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಜಿಲ್ಲಾ ಮುಖಂಡರ ಜೊತೆಗೆ ಅಭಿಪ್ರಾಯ ಪಡೆದಿದ್ದೇವೆ. ಹೈಕಮಾಂಡ್‍ಗೆ ಮಾಹಿತಿ ನೀಡಿದ್ದೇವೆ. ಯಾರೇ ಅಭ್ಯರ್ಥಿ ಆದರೂ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.
ನಮ್ಮ ನಾಯಕರು ಈಗಾಗಲೇ ಚುನಾವಣೆ ಗೆಲುವಿಗೆ ಸಿದ್ದತೆ ಮಾಡಿಕೊಂಡಿದ್ದಾರೆ. ಅ.4ರಂದು ಸಿಂಧಗಿಗೆ ನಾವು ನಮ್ಮ ಪಕ್ಷದ ಮುಖಂಡರು ಭೇಟಿ ನೀಡುತ್ತೇವೆ. ಅ.7ರಂದು ಹಾನಗಲ್ ಕ್ಷೇತ್ರಕ್ಕೆ ಭೇಟಿ ನೀಡಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗುತ್ತೇವೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಅಭ್ಯರ್ಥಿಗಳ ಬಗ್ಗೆ ಪುನರ್ ಪರಿಶೀಲಿಸಿ
ಹಾನಗಲ್ ಹಾಗೂ ಸಿಂಧಗಿ ಕ್ಷೇತ್ರಗಳ ಉಪ ಚುನಾವಣೆಗೆ ಜೆಡಿಎಸ್ ಕಣಕ್ಕಿಳಿಸಿರುವ ಅಭ್ಯರ್ಥಿಗಳ ಬಗ್ಗೆ ಪುನರ್ ಪರಿಶೀಲನೆ ಮಾಡಿ. ನಿಜವಾಗಿಯೂ ಜಾತ್ಯತೀತ ತತ್ವದ ಮೇಲೆ ನಂಬಿಕೆ ಇದ್ದರೆ ಕೋಮುವಾದಿ ಪಕ್ಷಕ್ಕೆ ಅನುಕೂಲ ಮಾಡಿಕೊಡಬೇಡಿ, ಜಾತ್ಯತೀತ ಮತಗಳನ್ನ ವಿಭಜನೆ ಮಾಡಬೇಡಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಮನವಿ ಮಾಡಿದರು.