×
Ad

ಸುದ್ದಿ ವಾಹಿನಿಯ ಚರ್ಚೆ ವೇಳೆ ಕಾಂಗ್ರೆಸ್ ವಕ್ತಾರೆ, ಪುತ್ರಿಗೆ ಬೆದರಿಕೆ; ಆರೋಪಿಯ ಬಂಧನಕ್ಕೆ ಸಿದ್ದರಾಮಯ್ಯ ಒತ್ತಾಯ

Update: 2021-10-02 23:03 IST

ಬೆಂಗಳೂರು: ಮಂಗಳೂರಿನ ಸ್ಥಳೀಯ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ನಡೆಯುತ್ತಿದ್ದ ಚರ್ಚೆ ವೇಳೆ ಕಾಂಗ್ರೆಸ್ ವಕ್ತಾರೆ ಹಾಗೂ ಆಕೆಯ ಪುತ್ರಿಗೆ ವ್ಯಕ್ತಿಯೊಬ್ಬ ಫೋನ್ ಕರೆ ಮೂಲಕ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಯ್ಯ, ಆರೋಪಿಯ ಬಂಧನಕ್ಕೆ ಒತ್ತಾಯಿಸಿದ್ದಾರೆ. 

ಇತ್ತೀಚೆಗೆ ಖಾಸಗಿ ಸುದ್ದಿವಾಹಿಯೊಂದರಲ್ಲಿ ಮಂಗಳೂರಿನ ಸುರತ್ಕಲ್ ನಲ್ಲಿ ವಿದ್ಯಾರ್ಥಿಗಳ ಮೇಲಿನ ಅನೈತಿಕ ಪೊಲೀಸ್ ಗಿರಿ ವಿಚಾರಕ್ಕೆ ಸಂಬಂಧಿಸಿ ಚರ್ಚೆ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಫೋನ್ ಮಾಡಿ ಲಾವಣ್ಯ ಬಳ್ಳಾಲ್ ಅವರಲ್ಲಿ ಮಾತನಾಡಬೇಕೆಂದು ನಿರೂಪಕರಲ್ಲಿ ಕೇಳಿಕೊಳ್ಳುತ್ತಾನೆ. ಅದರಂತೆ ಲಾವಣ್ಯ ಬಳ್ಳಾಲ್ ಅವರಗೆ ಪ್ರಶ್ನೆ ಮಾಡಿದ ವ್ಯಕ್ತಿ ''ನೀವು ಆರೆಸ್ಸೆಸ್, ಬಜರಂಗದಳದ ಬಗ್ಗೆ ಹೇಗೆ ಹಗುರವಾಗಿ ಮಾತನಾಡುತ್ತೀರಿ. ನಿಮ್ಮ ಮಗಳನ್ನು ಕಾರಿನಲ್ಲಿ ಕೂರಿಸಿ ನೀವು ಆರೆಸ್ಸೆಸ್ ಬಗ್ಗೆ ಮಾತಾನಿಡಿದ್ದೀರಲ್ಲ, ನೀವು ಹೊರಗಡೆ ಬಂದು ಮಾತನಾಡಿ ನಾವು ನಿಮಗೆ ಸಾರ್ವಜನಿಕವಾಗಿಯೇ ಹಲ್ಲೆ ಮಾಡುತ್ತೇವೆ'' ಎಂದು  ಬೆದರಿಕೆ ಹಾಕಿದ್ದಾನೆ. ಈ ವೇಳೆ ನಿರೂಪಕ ಸೇರಿದಂತೆ ಚರ್ಚೆಯಲ್ಲಿ ಭಾಗವಹಿಸಿದವರು ವ್ಯಕ್ತಿಯ ಹೇಳಿಕೆಯನ್ನು ಖಂಡಿಸಿದ್ದಾರೆ. 

''ಮಂಗಳೂರಿನ‌ ಸುದ್ದಿವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಪಕ್ಷದ ವಕ್ತಾರೆ ಲಾವಣ್ಯ ಬಲ್ಲಾಲ್ ಮತ್ತು ಅವರ ಮಗಳಿಗೆ ಹಲ್ಲೆಯ ಬೆದರಿಕೆಯೊಡ್ಡಿರುವುದು ಖಂಡನೀಯ ತಕ್ಷಣ ಸಂಘ ಪರಿವಾರಕ್ಕೆ ಸೇರಿದವನೆನ್ನಲಾದ ಈ ದುಷ್ಕರ್ಮಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಬೇಕು'' ಎಂದು ಸಿದ್ದರಾಮಯ್ಯ ಅವರು ಮಂಗಳೂರು ಕಮಿಷನರ್ ಅವರನ್ನು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News