ಶಾಸಕ ರಾಮದಾಸ್ ಆದಷ್ಟು ಬೇಗ ಮಂತ್ರಿಯಾಗಲಿ: ಸಚಿವ ಕೆ.ಎಸ್.ಈಶ್ವರಪ್ಪ

Update: 2021-10-02 17:42 GMT

ಮೈಸೂರು,ಅ.2: ಕ್ಷೇತ್ರದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಮಾದರಿ ಕ್ಷೇತ್ರದ ಹಂಬಲ ಹೊತ್ತಿರುವ ಶಾಸಕ ಎಸ್.ಎ.ರಾಮದಾಸ್ ಸಾಧ್ಯವಾದಷ್ಟು ಬೇಗನೆ ಸಚಿವರಾಗಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಆಶಯ ವ್ಯಕ್ತಪಡಿಸಿದ್ದಾರೆ.

ವಿದ್ಯಾರಣ್ಯಪುರಂ ರಾಮಲಿಂಗೇಶ್ವರಸ್ವಾಮಿ ದೇವಸ್ಥಾನದ ಎದುರು ಇರುವ ಉದ್ಯಾನವನದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿರುವ ಯುಗ್ ಉತ್ಸವದ ಅಂಗವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ, ಕನಕಗಿರಿ ಸರ್ಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಾಣದ ಶಿಲಾನ್ಯಾಸ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಕುವೆಂಪುನಗರ ಕೆ.ಪಿ.ಎಸ್ ಕೌಶಲ ಶಾಲೆಗೆ ಚಾಲನೆ, ಚಾಮುಂಡಿಬೆಟ್ಟದ ಪಾದದ ರಸ್ತೆ ಕಾಮಗಾರಿ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಮಾಡುತ್ತಿರುವ ಈ ವಿನೂತನ ಕಾರ್ಯಕ್ರಮ ರಾಜ್ಯದಲ್ಲಿ ಅಲ್ಲ, ದೇಶದಲ್ಲೇ ಮೊದಲಾಗಿದೆ. ಬಡವರಿಗೆ ಮನೆ ಕೊಡಿಸುವುದು, ಸೋಲಾರ್ ದೀಪ ಒದಗಿಸುವುದು, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಒಬ್ಬ ಶಾಸಕರು ಹೀಗೂ ಮಾಡಬಹುದೇ ಎನ್ನುವ ಯೋಚನೆ ಬರಲಿದೆ. ಹಾಗಾಗಿ, ಪುಸ್ತಕ ರೂಪದಲ್ಲಿ ಪ್ರಕಟಿಸಿ ಇಡೀ 224 ಕ್ಷೇತ್ರಗಳ ಶಾಸಕರಿಗೂ ಕಳುಹಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯ, ಕೇಂದ್ರಸರ್ಕಾರದಿಂದ ಅನುದಾನ ತಂದಿದ್ದಾರೆ. ಜನರು ಹೇಗೆ ಅಭಿವೃದ್ಧಿಯನ್ನು ಬಯಸುತ್ತಾರೆ ಎನ್ನುವುದನ್ನು ಅರಿತು ಅದೇ ರೀತಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಅದಷ್ಟು ಬೇಗನೆ ಮಂತ್ರಿಯಾಗಲೆಂದು ಹಾರೈಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News