ಎನ್‍ಒಸಿ ನೀಡಲು ಲಂಚಕ್ಕೆ ಬೇಡಿಕೆ ಆರೋಪ : ಎಎಸ್ಸೈ ಎಸಿಬಿ ಬಲೆಗೆ

Update: 2021-10-03 11:58 GMT

ಬೆಂಗಳೂರು, ಅ.3: ನಾಪತ್ತೆ ದೂರು ಸಂಬಂಧ ಎನ್‍ಒಸಿ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಸಂಬಂಧ ಇಲ್ಲಿನ ಕಾಡುಗೋಡಿ ಪೊಲೀಸ್ ಠಾಣೆಯ ಎಎಸ್ಸೈವೊಬ್ಬರು ಎಸಿಬಿ ಬಲೆಗೆ ಬಿದಿದ್ದಾರೆ.

ಕಾಡುಗೋಡಿ ಪೊಲೀಸ್ ಠಾಣೆಯ ಎಎಸ್ಸೈ ಶ್ರೀನಿವಾಸ್ ಎಂಬುವರನ್ನು ಬಂಧಿಸಲಾಗಿದೆ ಎಂದು ಎಸಿಬಿ ಹೇಳಿದೆ.
ಜಯನಗರದಲ್ಲಿ ಅನ್ಯ ಧರ್ಮಿಯ ಇಬ್ಬರು ಪರಸ್ಪರ ಪ್ರೀತಿಸಿ ಕೆಲ ತಿಂಗಳ ಹಿಂದೆ ಮನೆ ಬಿಟ್ಟು ಮದುವೆಯಾಗಿದ್ದರು. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಮಗಳು ನಾಪತ್ತೆಯಾಗಿದ್ದಾಳೆ ಎಂದು ಯುವತಿ ಪಾಲಕರು ದೂರು ನೀಡಿದ್ದರು.

ಇದಾದ ಬಳಿಕ ಪ್ರೇಮಿಗಳಿಬ್ಬರು ನಗರದಲ್ಲಿ ಮದುವೆ ನೋಂದಣಿ ಮಾಡಿಸಲು ಮುಂದಾಗಿದ್ದರು. ಇವರ ಮೇಲೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣದ ಬಗ್ಗೆ ಮಾಹಿತಿ (ಎನ್‍ಒಸಿ) ನೀಡುವಂತೆ ವಿವಾಹ ನೋಂದಣಿ ಕೇಂದ್ರದಲ್ಲಿ ಕೇಳಿದ್ದರು. ಹೀಗಾಗಿ, ಪ್ರೇಮಿಗಳ ಸ್ನೇಹಿತ ಶೈಲೇಂದ್ರ ಕಾಡುಗೋಡಿ ಪೊಲೀಸ್ ಠಾಣೆಗೆ ತೆರಳಿ ಎನ್‍ಒಸಿ ನೀಡುವಂತೆ ಮನವಿ ಮಾಡಿದ್ದರು. ಆದರೆ, ಎಎಸ್ಸೈ ಶ್ರೀನಿವಾಸ್ ಅವರು ಎನ್‍ಒಸಿ ನೀಡಲು 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 

ಲಂಚ ಕೊಡಲು ಇಚ್ಛಿಸದ ಶೈಲೇಂದ್ರ ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದರು. ದೂರಿನ್ವಯ ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News