ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ.ವಿಶೇಷ ಅನುದಾನ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-10-03 13:00 GMT

ಬಳ್ಳಾರಿ, ಅ. 3: `ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈಗ ನೀಡಲಾಗುತ್ತಿರುವ 1,500 ಕೋಟಿ ರೂ.ಖರ್ಚನ್ನು ಕಾಲಮಿತಿಯೊಳಗೆ ಸಮರ್ಪಕವಾಗಿ ಮಾಡಿದಲ್ಲಿ ಮುಂದಿನ ವರ್ಷ 3ಸಾವಿರ ಕೋಟಿ ರೂ. ವಿಶೇಷ ಅನುದಾನವನ್ನು ಒದಗಿಸುವುದಕ್ಕೆ ನಮ್ಮ ಸರರಕಾರ ಸಿದ್ಧವಾಗಿದೆ. ಈ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರವಿವಾರ ನಗರದ ಆರ್‍ವೈಎಂಇಸಿ ಕಾಲೇಜು ಆವರಣದಲ್ಲಿರುವ ಎಸ್.ಕೆ.ಮೋದಿ ನ್ಯಾಷನಲ್ ಸ್ಕೂಲ್, ವಿವಿ ಸಂಘದ ಕಿಂಡರ್ ಗಾರ್ಡನ್ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮತ್ತು ಎಸ್.ಕೆ.ಮೋದಿ ಅವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ 1,500 ಕೋಟಿ ರೂ. ಅನುದಾನವನ್ನು ನೀಡಿದ್ದು, ಆ ಮೊತ್ತವನ್ನು ಇದುವರೆಗೆ ಖರ್ಚು ಮಾಡಿಲ್ಲ. ಹೀಗಾಗಿ ವಿಶೇಷ ಯೋಜನೆ ರೂಪಿಸಿ. ಅದಕ್ಕೆ ಅಗತ್ಯ ಸಹಕಾರವನ್ನು ಸರಕಾರ ನೀಡಲಿದೆ. ಸಮರ್ಪಕವಾಗಿ ಅನುದಾನ ಬಳಕೆ ಮಾಡುವುದರ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ರೀತಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಅಭಿವೃದ್ಧಿ ನಕ್ಷೆಯಲ್ಲಿ ಬಳ್ಳಾರಿ ಜಿಲ್ಲೆಗೆ ಪ್ರಮುಖ ಸ್ಥಾನವಿದೆ. ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಿದೆ. ಅಭಿವೃದ್ಧಿ ಎಂಬುದು ನಿರಂತರವಾಗಿರಬೇಕು. ನೈಸರ್ಗಿಕ ಸಂಪತ್ತು ಮುಂದಿನ ಪೀಳಿಗೆಗೆ ತಲುಪಬೇಕು ಎಂದರು.

ಎಸ್.ಕೆ.ಮೋದಿ ಗುಣಗಾಣ: ಎಸ್.ಕೆ.ಮೋದಿ ಅವರು ಈ ಮಣ್ಣಿನಿಂದ ಗಳಿಸಿದ್ದ ಸಂಪತ್ತನ್ನು ಜನರ ವಿದ್ಯೆಗೆ ದಾನ ಮಾಡಿದ್ದಾರೆ. ನೈತಿಕವಾಗಿ ಇದು ಇತರರಿಗೆ ಮಾದರಿ ಎಂದು ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಸಿ.ಸಿ.ಪಾಟೀಲ್, ಸಂಸದರಾದ ದೇವೇಂದ್ರಪ್ಪ, ಕರಡಿ ಸಂಗಣ್ಣ, ಸೈಯದ್ ನಾಸೀರ್ ಹುಸೇನ್, ಶಾಸಕರಾದ ಸೋಮಶೇಖರ್ ರೆಡ್ಡಿ, ನಾಗೇಂದ್ರ, ಸೋಮಲಿಂಗಪ್ಪ, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಶಶೀಲ್ ನಮೋಶಿ, ಈ.ತುಕಾರಾಂ, ಬುಡಾ ಅಧ್ಯಕ್ಷ ಪಾಲನ್ನ, ಪರಿಷತ್ ಮಾಜಿ ಸದಸ್ಯ ಎನ್.ತಿಪ್ಪಣ್ಣ ಹಾಜರಿದ್ದರು.

`ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ, ನಾನು ಸಿಎಂ ಆಗಿರುವುದು ದೈವಿಚ್ಛೆ. ಮಾಜಿ ಸಿಎಂ ಬಿಎಸ್‍ವೈ ಮತ್ತು ಹೈಕಮಾಂಡ್ ಕಾರಣ ನಾನು ಸಿಎಂ ಆಗಿದ್ದೇನೆ. ತಾವೆಲ್ಲರೂ ನೀಡಿದ ಜವಾಬ್ದಾರಿ ದೊಡ್ಡದಿದೆ ಎಂಬ ಅರಿವು ನನಗಿದೆ, ತಾವು ನನ್ನ ಮೇಲೆ ಹಾಕಿರುವ ಶಾಲು ತಮ್ಮ ಶ್ರೀರಕ್ಷೆ ಎಂದು ಭಾವಿಸಿರುವೆ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ನನ್ನ ಮೇಲಿಟ್ಟುಕೊಂಡಿರುವ ನಿರೀಕ್ಷೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ'

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News