×
Ad

ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ

Update: 2021-10-03 18:37 IST

ಬಳ್ಳಾರಿ, ಅ. 3: `ಹಾನಗಲ್‍ಮತ್ತು ಸಿಂಧಗಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಎರಡೂ ಕ್ಷೇತ್ರಗಳಲ್ಲಿಯೂ ಭರ್ಜರಿ ಜಯಗಳಿಸಲಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಇಂದು ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಈ ಕ್ಷೇತ್ರದಿಂದ ತರಿಸಿಕೊಂಡ ವರದಿಯ ಕುರಿತು ಚರ್ಚಿಸಿ, ಪಕ್ಷದ ಸಂಸದೀಯ ಮಂಡಳಿಗೆ ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲಾಗುವುದು. ಶೀಘ್ರವೇ ಅಭ್ಯರ್ಥಿಯ ಹೆಸರು ಪ್ರಕಟವಾಗಲಿದೆ. ಪಕ್ಷವು ಬೂತ್ ಮಟ್ಟದಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರ ವರೆಗೆ ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸಿ, ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದರು.

ಮೇಕೆದಾಟು: `ಮೇಕೆದಾಟು ಅಣೆಕಟ್ಟು ಯೋಜನೆಯ ವಿಚಾರದಲ್ಲಿ ತಮಿಳುನಾಡು ರಾಜಕಾರಣ ಬೆರೆಸುತ್ತಿದ್ದು, ಈ ಯೋಜನೆ ತಮಿಳುನಾಡಿನ ಕೈಯಲ್ಲಿ ಇಲ್ಲ. ತಮಿಳು ನಾಡು ಸರ್ಕಾರವು ನಿರ್ಣಯ ಕೈಗೊಂಡು, ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ನಮ್ಮ ನಿಲುವಿನಲ್ಲಿ, ಪ್ರಯತ್ನದಲ್ಲಿ ಹಾಗೂ ಕಾನೂನು ಹೋರಾಟದಲ್ಲಿ ಯಾವುದೇ ಬದಲಾವಣೆ ಇಲ್ಲ. ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಸಿಎಂ ನುಡಿದರು.

ಬಳ್ಳಾರಿಯಲ್ಲಿ ಕೈಗಾರಿಕೆ ಸ್ಥಾಪನೆ: ಹತ್ತು, ಹನ್ನೇರಡು ವರ್ಷಗಳ ಅವಧಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಉನ್ನತ ಮಟ್ಟದ ಸಮಿತಿಗಳಲ್ಲಿ ಅನುಮೋದನೆ ಪಡೆದುಕೊಂಡು, ಭೂಮಿ, ನೀರು ಹಂಚಿಕೆ ಮಾಡಿಸಿಕೊಂಡರೂ ಕೈಗಾರಿಕೆಗಳು ಸ್ಥಾಪನೆಯಾಗದೆ ಇರುವ ಹಲವು ಪ್ರಕರಣಗಳು ತಮ್ಮ ಗಮನದಲ್ಲಿದೆ. ಇದರಿಂದಾಗಿ ಬಹುದೊಡ್ಡ ಪ್ರಮಾಣದ ಭೂಮಿ ಬಳಕೆಯಾಗದೆ ಇರುವುದು ಅರಿವಿದೆ. ಈ ಹಿನ್ನೆಲೆಯಲ್ಲಿ ಇಂತಹ ಯೋಜನೆಗಳ ಪುನರ್ ಪರಿಶೀಲನೆ ನಡೆಸಲಾಗುವುದು. ಈ ಕಂಪೆನಿಗಳು ಕೈಗಾರಿಕೆ ಸ್ಥಾಪಿಸದೆ ಇದ್ದರೆ, ಅವರ ಹಂಚಿಕೆಯನ್ನು ರದ್ದುಪಡಿಸಿ, ಉದ್ಯೋಗ ಸೃಷ್ಟಿಗೆ ಪೂರಕವಾದ ಕೈಗಾರಿಕೆ ಸ್ಥಾಪನೆಗೆ ಮುಂದೆ ಬರುವವರಿಗೆ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ತುಂಗಭದ್ರಾ ಸಮತೋಲನ ಜಲಾಶಯ: `ತುಂಗಭದ್ರಾ ಅಣೆಕಟ್ಟೆಯಲ್ಲಿ ಹೂಳು ತೆಗೆಯಲು ಯಾವುದೇ ಕಂಪೆನಿ ಮುಂದೆ ಬಾರದ ಹಿನ್ನೆಲೆಯಲ್ಲಿ ಸಮಾನಾಂತರವಾಗಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಹಿಂದಿನ ಅವಧಿಯಲ್ಲಿ ನಮ್ಮ ಸರಕಾರ ನಿರ್ಧರಿಸಿತ್ತು. ಅದರಂತೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಈ ಯೋಜನೆಯ ಡಿಪಿಆರ್ ಸಿದ್ಧಗೊಳಿಸಲು 20ಕೋಟಿ ರೂ.ಬಿಡುಗಡೆ ಮಾಡಿದ್ದಾರೆ. ಡಿಪಿಆರ್ ಸಿದ್ಧವಾದ ನಂತರ ಸಂಬಂಧ ಪಟ್ಟ ರಾಜ್ಯಗಳೊಂದಿಗೆ ಸೌಹಾರ್ದಯುತವಾಗಿ ಚರ್ಚಿಸಿ, ಈ ಯೋಜನೆಯನ್ನುಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು.

ಬಳ್ಳಾರಿ ಕುಡಿಯುವ ನೀರಿನ ಸಮಸ್ಯೆ: ಬಳ್ಳಾರಿ ನಗರದಲ್ಲಿ ಇಪ್ಪತ್ತ್ನಾಲ್ಕು ಗಂಟೆ ಕುಡಿಯುವ ನೀರಿನ ಯೋಜನೆ 10 ವರ್ಷಗಳಿಂದ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಹೀಗಾಗಿ ಮುಂದಿನ ತಿಂಗಳು ಬಳ್ಳಾರಿಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಮಾಹಿತಿ ತರಿಸಿಕೊಂಡು, ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News