×
Ad

ದಿಲ್ಲಿ ಮಾದರಿಯಲ್ಲಿ ರಾಜ್ಯದಲ್ಲಿಯೂ ‘ಶಾಸಕರ ಕ್ಲಬ್' ನಿರ್ಮಾಣ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

Update: 2021-10-04 20:09 IST

ಬೆಂಗಳೂರು, ಅ. 4: ‘ಹೊಸದಿಲ್ಲಿ ಮಾದರಿಯಲ್ಲಿ ರಾಜ್ಯದಲ್ಲಿಯೂ ಶಾಸಕರ ಮನರಂಜನಾ ಕ್ಲಬ್ (ಕಾನ್‍ಸ್ಟಿಟ್ಯೂಷನ್ ಕ್ಲಬ್) ನಿರ್ಮಾಣಕ್ಕೆ ತೀರ್ಮಾನ ಮಾಡಲಾಗಿದೆ’ ಎಂದು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಧಾನಸೌಧದ ಸಮೀಪದಲ್ಲಿನ ಬಾಲಬ್ರೂಯಿ ಕಟ್ಟಡದ ಜಾಗದಲ್ಲಿ ‘ಕಾನ್‍ಸ್ಟಿಟ್ಯೂಷನ್ ಕ್ಲಬ್’ ನಿರ್ಮಿಸಲು ನಿರ್ಧರಿಸಲಾಗಿದೆ. ಬಾಲಬ್ರೂಯಿ ಅತಿಥಿ ಗೃಹ ‘ಪಾರಂಪರಿಕ ಕಟ್ಟಡವಾಗಿದ್ದು, ಅದರ ಸ್ವರೂಪಕ್ಕೆ ಧಕ್ಕೆ ಆಗದಂತೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಬಾಲಬ್ರೂಯಿ ಐತಿಹಾಸಿಕ ಕಟ್ಟಡವಾಗಿದ್ದು, ಅದರ ಮೂಲ ರಚನೆಗೆ ಯಾವುದೇ ರೀತಿಯಲ್ಲಿ ಬದಲಾವಣೆ ಮಾಡುವುದಿಲ್ಲ. ದಿಲ್ಲಿಗೆ ನಾನೇ ಹೋಗಿ ಕಾನ್ಸ್‍ಸ್ಟಿಟ್ಯೂಷನ್ ಕ್ಲಬ್ ರಚನೆ ನೋಡಿಕೊಂಡು ಬರುತ್ತೇನೆ. ಆ ಬಳಿಕ ನಿಯಮಾವಳಿ ಕಾನೂನುಗಳ ರೀತಿಯಲ್ಲಿ ಶಾಸಕರ ಕ್ಲಬ್ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ಕಾಗೇರಿ ಮಾಹಿತಿ ನೀಡಿದರು.

ಬೆಳಗಾವಿಯಲ್ಲಿ ಅಧಿವೇಶನ: ಡಿಸೆಂಬರ್ ತಿಂಗಳಲ್ಲಿ ವಿಧಾನ ಮಂಡಲ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿದ್ದು, ಈ ಕುರಿತು ರಾಜ್ಯ ಸರಕಾರವೂ ಬೆಳಗಾವಿಯಲ್ಲೇ ಅಧಿವೇಶನ ನಡೆಸಲು ಚಿಂತನೆ ನಡೆದಿದೆ. ಆ ಬಗ್ಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಸರಕಾರಕ್ಕೆ ತಿಳಿಸಲಾಗುವುದು ಎಂದು ಸ್ಪೀಕರ್ ಹೇಳಿದರು.

ಸೆ.13ರಿಂದ 24ರ ವರೆಗೆ ನಡೆದ ವಿಧಾನ ಮಂಡಲ ಅಧಿವೇಶನ ಬಹಳ ಚೆನ್ನಾಗಿ ನಡೆದಿದೆ. ಇನ್ನೂ ಸ್ವಲ್ಪ ದಿನಗಳ ಕಾಲ ಅಧಿವೇಶನ ನಡೆಯಬೇಕೆಂಬುದು ಪ್ರತಿಪಕ್ಷಗಳು ಸೇರಿದಂತೆ ಎಲ್ಲರ ಅಭಿಪ್ರಾಯವಾಗಿತ್ತು ಎಂದ ಅವರು, 10 ದಿನಗಳ ಈ ಅಧಿವೇಶನದಲ್ಲಿ 150 ಪ್ರಶ್ನೆಗಳಲ್ಲಿ 146 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಶೂನ್ಯವೇಳೆ, ಗಮನ ಸೆಳೆಯುವ ಪ್ರಶ್ನೆಗಳು ಸೇರಿದಂತೆ ಎಲ್ಲವೂ ಸುಸೂತ್ರವಾಗಿ ಆಗಿದೆ. 19 ಮಸೂದೆಗಳು ಅಂಗೀಕಾರಗೊಂಡಿವೆ ಎಂದು ವಿವರ ನೀಡಿದರು.

ಅಧಿವೇಶನವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿ ಸಹಿತ ಎಲ್ಲ ಸಚಿವರೂ ಕಲಾಪದಲ್ಲಿ ಪಾಲ್ಗೊಂಡಿದ್ದರು. ಪ್ರತಿಪಕ್ಷ ಕಾಂಗ್ರೆಸ್ ಧರಣಿ ಮಾಡದಿರುವುದ ತೀರ್ಮಾನ ಮಾಡಿದ್ದರು. ಜೆಡಿಎಸ್ ಪಕ್ಷದವರು ತಮ್ಮ ನಿಲುವು ವ್ಯಕ್ತಪಡಿಸಿದ್ದರು. ಹೀಗಾಗಿ ಈ ಅಧಿವೇಶನದಲ್ಲಿ ಸದನದ ಸಮಯ ವ್ಯರ್ಥ ಆಗಿಲ್ಲ. ಇದು ಒಳ್ಳೆಯ ಬೆಳವಣಿಗೆ ಎಂದು ಸ್ಪೀಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಭಾಗವಹಿಸಬೇಕಿತ್ತು: ವಿಧಾನ ಮಂಡಲ ಉಭಯ ಸದನಗಳನ್ನು ಉದ್ದೇಶಿಸಿ, ಸಂಸದೀಯ ಮೌಲ್ಯಗಳ ಬಗ್ಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಾತನಾಡಿದರು. ವ್ಯವಸ್ಥೆಯನ್ನು ಸುಧಾರಿಸಲು ಓಂ ಬಿರ್ಲಾ ಮಾತನಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ವಿಪಕ್ಷ ಕಾಂಗ್ರೆಸ್ ಸದಸ್ಯರು ಭಾಗವಹಿಸಿದ್ದರೆ, ಅದರ ಮೌಲ್ಯ ಹೆಚ್ಚುತ್ತಿತ್ತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News