ಮಂಡ್ಯದಲ್ಲಿ ರೈತರಿಂದ ಸಚಿವ ಆರ್.ಅಶೋಕ್‍ ಗೆ ಘೇರಾವ್

Update: 2021-10-04 15:47 GMT

ಮಂಡ್ಯ, ಅ.4: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸೋಮವಾರ ರೈತರು ಕಂದಾಯ ಸಚಿವ ಆರ್.ಅಶೋಕ್ ಅವರ ಕಾರನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಈ ಸಂದರ್ಭ ಕೆಲಕಾಲ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ಸೃಷ್ಟಿಯಾಗಿತ್ತು.

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಸಚಿವ ಅಶೋಕ್, ಪೂಜೆ ಸಲ್ಲಿಸಿದ ಬಳಿಕ ಕಾರಿನಲ್ಲಿ ತೆರಳುವ ವೇಳೆ ರೈತಸಂಘದ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿ ಪ್ರತಿಭಟಿಸಿದ್ದಾರೆ.

ಪ್ರತಿಭಟನೆಯನ್ನು ಕಡೆಗಣಿಸಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಆಕ್ರೋಶಗೊಂಡ ಕೆಲವು ರೈತರು ಸಚಿವರ ಕಾರಿಗೆ ಅಡ್ಡಮಲಗಿ, ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ‘ಕೊಲೆಗಡುಕ’ ಸರಕಾರಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬಿಜೆಪಿ ಮತ್ತು ರೈತಸಂಘದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.  ತಕ್ಷಣ ಕಾರಿನಿಂದ ಇಳಿದು ಬಂದ ಸಚಿವ ಅಶೋಕ್, ರೈತರ ಮನವಿಯನ್ನು ಆಲಿಸುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು.

ರೈತ ವಿರೋಧಿ ಕೃಷಿ ಮಸೂದೆಗಳು, ಭೂಸುಧಾರಣಾ ಕಾಯ್ದೆಗಳನ್ನು ಹಿಂಪಡೆಯಬೇಕು. ರಾಜ್ಯದ ಏಕೈಕ ಸರಕಾರಿ ಸ್ವಾಮ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಸರಕಾರವೇ ತಕ್ಷಣ ಆರಂಭಿಸಬೇಕು. ಸರಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ ತಡೆಗಟ್ಟಬೇಕು ಎಂದು ರೈತರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News