ಮೋದಿ ಚಿನ್ನದ ಗಟ್ಟಿ ಇದ್ದಂತೆ: ಸಚಿವ ಈಶ್ವರಪ್ಪ
ಕಲಬುರಗಿ, ಅ. 4: ಪ್ರಧಾನಿ ಮೋದಿ ಚಿಲ್ಲರೆ ಅಲ್ಲ, ಅವರು ಚಿನ್ನದ ಗಟ್ಟಿ. ಮೋದಿಯವರ ಬಗ್ಗೆ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಬಾಯಿ ತಪ್ಪಿ ಹೇಳಿಕೆ ನೀಡಿದ್ದರೆ ಕೂಡಲೇ ಕ್ಷಮೆಯಾಚಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಆಗ್ರಹಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೋದಿಯವರ ಕುರಿತ ಖರ್ಗೆ ಮಾತಿಗೆ ಜನರು ಬೆಲೆ ಕೊಡುವ ಅಗತ್ಯವಿಲ್ಲ. ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಗೌರವವಿದೆ. ಆದರೆ, ಅವರು ಮೋದಿ ಬಗ್ಗೆ ಆಡಿದ ಮಾತಿಗೆ ಅತೀವ ಬೇಸರವಾಗಿದೆ ಎಂದು ನುಡಿದರು.
ಖರ್ಗೆಯವರ ಮಾತು ಅವರಿಗೆ ಸರಿಯನಿಸಿದರೆ ನಾನು ಏನು ಹೇಳುವುದಿಲ್ಲ. ಖರ್ಗೆ ಅವರು ಕ್ಷಮೆ ಕೇಳಿದರೆ ಅವರ ಗೌರವ ಮತ್ತಷ್ಟು ಹೆಚ್ಚಾಗಲಿದೆ. ಪ್ರತಿಪಕ್ಷ ಕಾಂಗ್ರೆಸ್ ತುಂಡು ತುಂಡಾಗಿದ್ದು, ಒಬ್ಬೊಬ್ಬರು ಒಂದು ದಿಕ್ಕಿಗೆ ಮುಖಮಾಡಿದ್ದಾರೆ. ಆದರೆ, ಬಿಜೆಪಿ ಶಾಸಕರು ಸಿಂಹಗಳಿದ್ದಂತೆ, ಯಾವುದೇ ಕಾರಣಕ್ಕೂ ಮಾರಾಟ ಆಗುವುದಿಲ್ಲ ಎಂದು ನುಡಿದರು.