ಪಕ್ಷದ ಹಿರಿಯ ನಾಯಕರ ವಿರುದ್ಧ ಟೀಕೆಗಳು ಬೇಡ: ಬಿ.ವೈ.ವಿಜಯೇಂದ್ರ

Update: 2021-10-04 17:37 GMT

ಬೆಂಗಳೂರು, ಅ.4: ಉಪಚುನಾವಣೆ ಘೋಷಣೆಯಾಗಿರುವ ಎರಡು ಕ್ಷೇತ್ರಗಳ ಉಸ್ತುವಾರಿಗಳ ಪಟ್ಟಿಯಲ್ಲಿ ನನ್ನ ಹೆಸರಿಲ್ಲ ಎನ್ನುವ ಕಾರಣಕ್ಕೆ ಕೆಲವು ಅಭಿಮಾನಿಗಳು, ಕಾರ್ಯಕರ್ತರು ಪಕ್ಷದ ಹಿರಿಯ ನಾಯಕರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಖಂಡಿತಾ ಸರಿಯಲ್ಲ, ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವುದೂ ಸೇರಿದಂತೆ ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸಲು ನಾನು ಕಟಿಬದ್ಧನಾಗಿದ್ದೇನೆ. ಪಕ್ಷದ ಗೆಲುವೇ ನಮಗೆ ಮುಖ್ಯ, ಇನ್ನ್ಯಾವುದೂ ಅಲ್ಲ. ಭಿನ್ನಾಭಿಪ್ರಾಯದ ಧ್ವನಿಗಳಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡುತ್ತದೆ, ವಿಪಕ್ಷಗಳಿಗೆ ಪರೋಕ್ಷ ನೆರವು ನೀಡಿದಂತಾಗುತ್ತದೆ ಎಂದು ಹೇಳಿದ್ದಾರೆ.

ಪಕ್ಷದ ತೀರ್ಮಾನದಂತೆ, ನಮ್ಮ ಎಲ್ಲ ನಾಯಕರ ಮಾರ್ಗದರ್ಶನದಲ್ಲಿ, ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ನಾವು ಕಾರ್ಯನಿರ್ವಹಿಸೋಣ. ಪಕ್ಷಕ್ಕೆ ಮುಜುಗರ ತರುವ ಯಾವುದೇ ವಿಷಯಕ್ಕೂ ನನ್ನ ಸಮ್ಮತಿಯಿಲ್ಲ. ನಮ್ಮ ಎಲ್ಲ ಪ್ರಯತ್ನಗಳನ್ನೂ ಪಕ್ಷದ ಹಿತ ಮತ್ತು ಗೆಲುವಿಗಾಗಿಯೇ ವಿನಿಯೋಗಿಸೋಣ ಎಂದು ವಿಜಯೇಂದ್ರ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News