×
Ad

ಹೋಮಿಯೋಪತಿ ಔಷಧ ಮಂಡಳಿ ಚುನಾವಣೆ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2021-10-04 23:14 IST

ಬೆಂಗಳೂರು, ಅ.4: ಕರ್ನಾಟಕ ಹೋಮಿಯೋಪತಿ ಪದ್ಧತಿ ಔಷಧ ಮಂಡಳಿಯ ಚುನಾವಣೆಯಲ್ಲಿ ಭೌತಿಕ ಮತದಾನಕ್ಕೆ ಅವಕಾಶ ಕಲ್ಪಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ತಕರಾರು ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ಡಾ. ಪ್ರಕಾಶ್ ಮಂಟಿಕೊಪ್ಪ ಸೇರಿ ಮೂವರು ಹೋಮಿಯೋಪತಿ ವೈದ್ಯರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ಸೋಮವಾರ ವಿಚಾರಣೆ ನಡೆಸಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಹೋಮಿಯೋಪತಿ ಮಂಡಳಿ ರಿಜಿಸ್ಟ್ರಾರ್‍ಗೆ ನೋಟಿಸ್ ಜಾರಿಗೊಳಿಸಿದ ಪೀಠ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರ ಪರ ವಕೀಲ ದೇವಿ ಪ್ರಸಾದ್ ಶೆಟ್ಟಿ ವಾದ ಮಂಡಿಸಿ, ಕರ್ನಾಟಕ ಹೋಮಿಯೋಪಥಿ ವೈದ್ಯರ ಕಾಯ್ದೆ-1961ರ ಸೆಕ್ಷನ್ 11 ಹಾಗೂ 12 ಪ್ರಕಾರ ಹೋಮಿಯೋಪತಿ ಮಂಡಳಿಯ ಚುನಾವಣೆಯಲ್ಲಿ ಅಂಚೆ ಮತಪತ್ರ ಮೂಲಕ ಮಾತ್ರ ಮತದಾನ ಮಾಡಲು ಅವಕಾಶವಿದೆ. ಈ ವ್ಯವಸ್ಥೆಯಲ್ಲಿ ಅಕ್ರಮ ನಡೆಯುವ ಸಾಧ್ಯತೆ ಇರುತ್ತದೆ. ಯಾರ ಮತವನ್ನು ಯಾರು ಬೇಕಿದ್ದರೂ ಚಲಾಯಿಸಬಹುದಾಗಿದ್ದು, ಚುನಾವಣೆಯಲ್ಲಿ ಪಾರದರ್ಶಕತೆ ಇರುವುದಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಇತ್ತೀಚಿನ ತಂತ್ರಜ್ಞಾನ ಬಳಸಿಕೊಂಡು ಸದಸ್ಯರ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್‍ಗೆ ಮತಪತ್ರ ಕಳುಹಿಸಿ, ಮತ ಚಲಾವಣೆಗೆ ಅವಕಾಶ ಕಲ್ಪಿಸಲು ಅಥವಾ ಭೌತಿಕ ಮತದಾನ ವ್ಯವಸ್ಥೆ ಕಲ್ಪಿಸಲು ಸರಕಾರ ಹಾಗೂ ಮಂಡಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News