ಬಾಬಾಬುಡಾನ್ ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ಪೂಜೆ; ಹೈಕೋರ್ಟ್ ತೀರ್ಪಿನ ಅನುಷ್ಠಾನಕ್ಕೆ ಸಂಪುಟ ಉಪಸಮಿತಿ ರಚನೆ

Update: 2021-10-05 16:02 GMT
ಫೈಲ್ ಚಿತ್ರ

ಬೆಂಗಳೂರು, ಅ. 5: ‘ಬಾಬಾಬುಡಾನ್‍ಗಿರಿಯ ಗುರುದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾ ಇನಾಂ ದತ್ತಪೀಠ'ದಲ್ಲಿ ಪೂಜಾ ವಿಧಾನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಅನುಷ್ಠಾನಕ್ಕೆ ಸಚಿವ ಸಂಪುಟ ಉಪ ಸಮಿತಿ ರಚನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಮಾಡಿದೆ.

ಮಂಗಳವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಂಪುಟ ಸಭೆ ಬಳಿಕ ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ಬಾಬಾಬುಡಾನ್ ಸ್ವಾಮಿ ದರ್ಗಾ ದತ್ತಪೀಠದಲ್ಲಿನ ಪಾದುಕೆ ಪೂಜೆಗೆ ‘ಮುಝಾವರ್' ನೇಮಕ ಮಾಡಿದ್ದನ್ನು ಹೈಕೋರ್ಟ್ ಅಸಿಂಧುಗೊಳಿಸಿ ನೀಡಿರುವ ತೀರ್ಪನ್ನು ಅನುಷ್ಠಾನ ಯಾವ ರೀತಿಯಲ್ಲಿ ಮಾಡಬೇಕೆಂಬ ಬಗ್ಗೆ ಸಂಪುಟ ಉಪ ಸಮಿತಿ ತೀರ್ಮಾನ ಮಾಡಲಿದೆ ಎಂದರು.

‘ಬಾಬಾಬುಡಾನ್ ಗಿರಿ ದತ್ತಪೀಠಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕೆ ಅಥವಾ ಹೈಕೋರ್ಟ್ ತೀರ್ಪಿನ ಸಾಧಕ-ಬಾಧಕಗಳು ಯಾವ ರೀತಿ ಮುಂದುವರೆಯಬೇಕೆಲ್ಲದರ ಬಗ್ಗೆಯೂ ಚರ್ಚಿಸಿ ಸಚಿವ ಸಂಪುಟಕ್ಕೆ ಈ ಉಪಸಮಿತಿ ವರದಿಯನ್ನು ನೀಡಲಿದೆ ಎಂದು ಮಾಧುಸ್ವಾಮಿ ಮಾಹಿತಿ ನೀಡಿದರು.

ಸಚಿವ ಸಂಪುಟ ಉಪಸಮಿತಿಯ ವರದಿಯನ್ನಾಧರಿಸಿ ನ್ಯಾಯಾಲಯ ತೀರ್ಪನ್ನು ಅನುಷ್ಠಾನಗೊಳಿಸುವ ಬಗ್ಗೆ ಸಂಪುಟ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ. ಕಾನೂನು ಸಚಿವರ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಲಾಗಿದ್ದು, ಸಚಿವರಾದ ಆರ್.ಅಶೋಕ್, ವಿ.ಸುನೀಲ್‍ಕುಮಾರ್, ಶಶಿಕಲಾ ಜೊಲ್ಲೆ ಸಂಪುಟ ಉಪಸಮಿತಿಯ ಸದಸ್ಯರಾಗಿರುತ್ತಾರೆ ಎಂದರು.

► ಸಚಿವ ಸಂಪುಟದ ಸಭೆಯ ಇತರ ಪ್ರಮುಖ ತೀರ್ಮಾನಗಳು 

200 ರೂ.ಹೆಚ್ಚಳಕ್ಕೆ ಒಪ್ಪಿಗೆ: ‘ಸಂಧ್ಯಾ ಸುರಕ್ಷಾ ಯೋಜನೆ'ಯಡಿ ಹಿರಿಯ ನಾಗರಿಕರ ಪಿಂಚಣಿಯಲ್ಲಿ 200 ರೂ.ಏರಿಕೆ ಮಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತೀರ್ಮಾನಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ನೀಡಲಾಗುತ್ತಿದ್ದ 600 ರೂ.ಪಿಂಚಣಿಯನ್ನು 800 ರೂ.ಗಳಿಗೆ, 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 1 ಸಾವಿರ ರೂ. ಗಳಿಂದ 1,200 ರೂ.ಗಳಿಗೆ ಪಿಂಚಣಿಯನ್ನು ಏರಿಸುವ ತೀರ್ಮಾನಕ್ಕೆ ಸಂಪುಟ ಅನುಮೋದನೆ ನೀಡಿದ್ದು, ಇದರಿಂದ ರಾಜ್ಯ ಸರಕಾರಕ್ಕೆ ವಾರ್ಷಿಕ 207ಕೋಟಿ ರೂ.ಗಳ ಹೊರೆಯಾಗುತ್ತದೆ ಎಂದು ಮಾಧುಸ್ವಾಮಿ ಮಾಹಿತಿ ನೀಡಿದರು.

ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನ ತಮ್ಮ ಚೊಚ್ಚಲ ಏಕವ್ಯಕ್ತಿ ಸಚಿವ ಸಂಪುಟ ಸಭೆ ಸಂಧ್ಯಾ ಸುರಕ್ಷಾ ಯೋಜನೆಯ ಪಿಂಚಣಿ ಮೊತ್ತವನ್ನು 200 ರೂ. ಗಳನ್ನು ಹೆಚ್ಚಿಸಲಾಗುವುದು ಘೋಷಣೆ ಮಾಡಿದ್ದರು.

ಮೈಶುಗರ್ ಕಾರ್ಖಾನೆ: ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ಸರಕಾರವೇ ನಡೆಸಬೇಕೇ ಅಥವಾ ಖಾಸಗಿಯವರಿಗೆ ನೀಡಬೇಕೇ ಎಂಬ ಬಗ್ಗೆ ಪರಿಶೀಲಿಸಿ ವರದಿ ನೀಡಲು ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಸಚಿವರಾದ ಆರ್.ಅಶೋಕ್, ನಾರಾಯಣಗೌಡ, ಗೋವಿಂದ ಕಾರಜೋಳ ಅವರು ಸದಸ್ಯರುಗಳಾಗಿದ್ದಾರೆ ಎಂದು ಮಾಧುಸ್ವಾಮಿ ತಿಳಿಸಿದರು.

ಸರಕಾರದ ಭದ್ರತೆ: ಸಹಕಾರ ಇಲಾಖೆ 1,550ಕೋಟಿ ರೂ.ಸಾಲ ಪಡೆಯಲು ಸರಕಾರದ ಖಾತರಿ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಉತ್ತರ ಕನ್ನಡದಲ್ಲಿ ಸಮುದ್ರ ಮತ್ತು ನದಿ ನೀರು ಸೇರುವ ಸ್ಥಳದಲ್ಲಿ, ಸಿಹಿ ನೀರು ಮತ್ತು ಸಮುದ್ರದ ಉಪ್ಪು ನೀರು ಮಿಶ್ರಣ ಆಗುವುದನ್ನು ತಡೆಗಟ್ಟಲು ತಡೆಗೋಡೆ ನಿರ್ಮಿಸಲು ಕರಾವಳಿ ನದಿ ಕಾರ್ ಲ್ಯಾಂಡ್ ಯೋಜನೆಯಡಿ 300 ಕೋಟಿ ರೂ.ಕಾಮಗಾರಿಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕ ಇನ್ನೂ ಕಾಯ್ದೆ ಆಗಿಲ್ಲ. ವಿಧಾನ ಪರಿಷತ್‍ನ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಹಿ ಹಾಕಿಲ್ಲ. ಸಭಾಪತಿ ಅವರ ಸಹಿ ಬಳಿಕ ರಾಜ್ಯಪಾಲರಿಗೆ ಮಸೂದೆ ರವಾನಿಸಲಾಗುವುದು. ರಾಜ್ಯಪಾಲರ ಒಪ್ಪಿಗೆ ಬಳಿಕ ಕಾಯ್ದೆಯಾಗುತ್ತದೆ. ನಂತರ ಸುಪ್ರೀಂ ಕೋರ್ಟ್ ಗಮನಕ್ಕೆ ಕಾಯ್ದೆ ತರಲಾಗುತ್ತದೆ ಎಂದು ಹೇಳಿದರು.

‘ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿದ್ದ ಹೆಬ್ರಿ ಹೊಸದಾಗಿ ತಾಲೂಕು ಆಗಿ ರಚನೆ ಮಾಡಿದ್ದು, ಆ ತಾಲೂಕಿನಲ್ಲಿ ಹೊಸ ಹೋಬಳಿ ಕೇಂದ್ರ ಸೃಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಜೊತೆಗೆ ಉಡುಪಿ-ಖಾನಾಪುರ ಹೆದ್ದಾರಿಯಲ್ಲಿ 5 ಕಿಲೋ ಮೀಟರ್ ದ್ವಿಪಥ ರಸ್ತೆ ನಿರ್ಮಿಸಲು 15 ಕೋಟಿ ರೂ.ಹಣ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ'

-ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News