×
Ad

ಎಂ.ಬಿ.ಪಾಟೀಲ್ ಆರೋಪ ಸಾಬೀತು ಪಡಿಸಲಿ, ಇಲ್ಲವೇ ಬಹಿರಂಗ ಕ್ಷಮೆಯಾಚಿಸಲಿ: ಸಚಿವ ಕಾರಜೋಳ

Update: 2021-10-05 17:47 IST

ಬೆಂಗಳೂರು, ಅ. 5: ‘ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ’ ಎಂಬ ಕಾಂಗ್ರೆಸ್ ಪಾದಯಾತ್ರೆ ಹಾನಗಲ್ ಮತ್ತು ಸಿಂಧಗಿ ಮತಕ್ಷೇತ್ರಗಳ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಒಂದು ಚುನಾವಣಾ ಗಿಮಿಕ್. ಇಂತಹ ಚುನಾವಣಾ ಗಿಮಿಕ್‍ಗಳಿಗೆ ಜನ ಮರಳಾಗುವುದಿಲ್ಲ. ತಂತ್ರಗಾರಿಕೆಗಳಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ' ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಯಾವಾಗಲೂ ‘ಕೃಷ್ಣೆಯ ನಡಿಗೆ ಸತ್ಯದ ಕಡೆಗೆ’ ಎಂಬುದನ್ನು ಪರಿಪಾಲಿಸುತ್ತಾ ಬಂದಿದ್ದು ಉಪಚುನಾವಣೆ ಇರಲಿಲ್ಲ ಎಂದಿದ್ದರೆ ಕಾಂಗ್ರೆಸ್ ‘ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ’ ಇರುತ್ತಿರಲಿಲ್ಲ. ಅದು ನಿರ್ಲಕ್ಷ್ಯದ ಕಡೆಗೆ ಇರುತ್ತಿತ್ತು ಎಂದು ಟೀಕಿಸಿದರು.
ಮಾಜಿ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಅವರು ‘ನಾನು ಕೃಷ್ಣಾ ಕಾಂಗ್ರೆಸ್ ಪಾಪದ ಕೂಸು' ಎಂದು ಹೇಳಿದ್ದೇನೆಂದು ಸುಳ್ಳು ಹೇಳಿದ್ದಾರೆ. ನಾನು ಯಾವತ್ತೂ ಹೇಳಿಲ್ಲ ಮತ್ತು ಹೇಳುವವನೂ ಅಲ್ಲ. ನಾನು ಈ ರೀತಿ ಹೇಳಿದ್ದೇನೆಂದು ಎಂ.ಬಿ.ಪಾಟೀಲ್ ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಕಾರಜೋಳ ಒತ್ತಾಯಿಸಿದರು.

ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಕೃಷ್ಣಾ  ಮೇಲ್ದಂಡೆ ಯೋಜನೆಗಳಿಗೆ ಯಾವುದೇ ರೀತಿಯ ಸಮರ್ಪಕ ಹಣಕಾಸು ಒದಗಿಸಲಿಲ್ಲ. ಆದುದರಿಂದ ಈ ಯೋಜನೆಗಳು ಕುಂಟುತ್ತಾ.. ತೆವಳುತ್ತಾ.. ಜನರಿಗೆ ಯಾವುದೇ ರೀತಿಯ ಸಹಾಯವಾಗದ ರೀತಿಯಲ್ಲಿ ಮುನ್ನಡೆದವು. 2008ರಿಂದ 2013ರ ವರೆಗೆ ಬಿಜೆಪಿ ಅಧಿಕಾರದಲ್ಲಿದ್ದಾಗ ಇಂದಿನ ಸಿಎಂ ಬಸವರಾಜ ಬೊಮ್ಮಾಯಿ ಜಲ ಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಸಿಂಧಗಿ ಮತಕ್ಷೇತ್ರಕ್ಕೆ ಅನುಕೂಲವಾಗುವ ಇಂಡಿ ಶಾಖಾ ಕಾಲುವೆ ಮತ್ತು ಗುತ್ತಿ ಬಸವಣ್ಣ ಏತ ನೀರಾವರಿ ಕಾಮಗಾರಿಗಳನ್ನು ಪೂರ್ಣಗೊಳಿಸಿದರು ಎಂದು ಹೇಳಿದರು.

ಈ ಎರಡೂ ಯೋಜನೆಗಳಿಗೆ 1 ಸಾವಿರ ಕೋಟಿ ರೂ.ಗಳು ಖರ್ಚಾಗಿದ್ದು 80 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿ ರೈತರ ಬಾಳನ್ನು ಹಸನು ಮಾಡಲಾಗಿದೆ. ಸಿಂಧಗಿ ಮತಕ್ಷೇತ್ರದ ಜನತೆಗೆ ಬಿಜೆಪಿ ಮಾಡಿದ ಅಭಿವೃದ್ಧಿಯ ಬಗ್ಗೆ ಸೂಕ್ತವಾದ ಕಲ್ಪನೆ ಇದ್ದು, ಕಾಂಗ್ರೆಸ್ ಪಾದಯಾತ್ರೆಯಂತಹ ಹೊಸ ನಾಟಕದಿಂದ ಮೋಸ ಹೋಗುವುದಿಲ್ಲ. ಬಿಜೆಪಿ ಗೆಲುವು ನಿಶ್ಚಿತ ಎಂದು ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಗಿಮಿಕ್‍ಗಳನ್ನು ಮಾಡುತ್ತಿದೆ. ಈಗ ಸಿಂಧಗಿ ಹಾಗೂ ಹಾನಗಲ್ ಉಪಚುನಾವಣೆ ಮತ್ತು ಡಿಸೆಂಬರ್ ಹೊತ್ತಿಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಚುನಾವಣೆ ಬರುವುದರಿಂದ ಈ ಹೊಸ ನಾಟಕ ಪ್ರಾರಂಭಿಸಿದ್ದಾರೆ. ಗಾಂಧೀಜಿಯವರ ಹೆಸರನ್ನು ಏಕೆ ದುರುಪಯೋಗ ಮಾಡಿಕೊಳ್ಳುತ್ತಾರೆಂಬುದು ಗೊತ್ತಿಲ್ಲ ಕಾಂಗ್ರೆಸ್ ಗಾಂಧೀಜಿಯವರ ಹೆಸರನ್ನು ಹೇಳುವಂತಹ ನೈತಿಕತೆಯೇ ಇಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್‍ನವರು ಜನರಿಗೆ ಮೋಸವಾಡಿರುವಂತಹದ್ದು ಇತಿಹಾಸ. ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಮತ್ತು ಭೂಸ್ವಾಧೀನ ಕಾಮಗಾರಿಗಳಿಗೆ ಹಣ ನೀಡದೇ 20 ಹಳ್ಳಿಗಳನ್ನು ಸ್ಥಳಾಂತರ ಮಾಡದೇ ಕೃಷ್ಣಾ ಮೇಲ್ದಂಡೆ ಮೂರನೆ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲಿಲ್ಲ. ಇದರಿಂದಾಗಿ ನಮ್ಮ ಕೃಷ್ಣಾ  ಕಣ್ಣೀರು ಸುರಿಸುವಂತಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News