×
Ad

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ಅರ್ಜಿ ವಜಾ

Update: 2021-10-05 18:23 IST

ಬೆಂಗಳೂರು, ಅ.5: ನಗರದ ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರ ಸಾವು  ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾ ಸಂಪಾದಕ ಶಂಕರ್ ಮತ್ತು ಇಬ್ಬರು ಅಳಿಯಂದಿರ ಜಾಮೀನು ಅರ್ಜಿಯನ್ನು ನಗರದ ಸಿಟಿ ಸಿವಿಲ್ ಕೋರ್ಟ್ ವಜಾಗೊಳಿಸಿ ಆದೇಶ ನೀಡಿದೆ. 

ಈ ಮೂವರು ಆರೋಪಿಗಳು ಕೋರ್ಟ್‍ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ನ್ಯಾಯಪೀಠವು ವಕೀಲರ ವಾದವನ್ನು ಆಲಿಸಿ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿತು.  

ಬ್ಯಾಡರಹಳ್ಳಿ ಠಾಣೆ ಪೊಲೀಸರು ಶಂಕರ್ ಮತ್ತು ಅಳಿಯಂದಿರಾದ ಪ್ರವೀಣ್, ಶ್ರೀಕಾಂತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಅ.2ರಂದು ಈ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದರು.

ಆತ್ಮಹತ್ಯೆಗೂ ಮುನ್ನ ಶಂಕರ್ ಅವರ ಮೂವರು ಮಕ್ಕಳು ಬರೆದಿದ್ದ ಡೆತ್‍ನೋಟ್‍ನಲ್ಲಿರುವ ಅಂಶಗಳನ್ನು ಆಧರಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಬ್ಯಾಡರಹಳ್ಳಿ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ಐದು ಮಂದಿಯ ಹೆಸರಿದೆ. 

ಮನೆ ಯಜಮಾನ ಶಂಕರ್, ಅಳಿಯಂದಿರಾದ ಪ್ರವೀಣ್, ಶ್ರೀಕಾಂತ ಮತ್ತು ಪ್ರವೀಣ್ ಅವರ ತಂದೆ-ತಾಯಿಯ ಹೆಸರನ್ನು ಪ್ರಕರಣದಲ್ಲಿ ಉಲ್ಲೇಖಿಸಲಾಗಿತ್ತು. ಇದೀಗ ಪ್ರವೀಣ್ ಅವರ ತಂದೆ-ತಾಯಿಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಕರೆತಂದು ವಿಚಾರಣೆ ನಡೆಸಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಶಂಕರ್ ಅವರಿಗೆ ಐವರು ಮಹಿಳೆಯರೊಂದಿಗೆ ಸಂಪರ್ಕವಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಇದೀಗ ಆ ಮಹಿಳೆಯರನ್ನು ಪತ್ತೆಹಚ್ಚಿ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News