ಡಿಮ್ಹಾನ್ಸ್ ಗೆ ಅಗತ್ಯ ಸೌಲಭ್ಯ ಕಲ್ಪಿಸದ್ದಕ್ಕೆ ಹೈಕೋರ್ಟ್ ಅಸಮಾಧಾನ

Update: 2021-10-05 13:38 GMT

ಬೆಂಗಳೂರು, ಅ.5: ಉತ್ತರ ಕರ್ನಾಟಕ ಭಾಗದ ಜನರ ಪಾಲಿಗೆ ಪ್ರಮುಖ ಆರೋಗ್ಯ ಸಂಸ್ಥೆಯಾಗಿರುವ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್)ಗೆ ಅಗತ್ಯ ಸೌಲಭ್ಯಗಳನ್ನು ಒಗದಿಸುವ ವಿಚಾರದಲ್ಲಿ ಸರಕಾರದ ನಿರ್ಲಕ್ಷಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಕುರಿತು ವಿವರಣೆ ನೀಡಲು ನ.8ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.

ಈ ವಿಚಾರವಾಗಿ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹೈಕೋರ್ಟ್ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ಆಗ, ಡಿಮ್ಹಾನ್ಸ್ ಸಂಸ್ಥೆಗೆ ತಕ್ಷಣ ಎಂಆರ್‍ಐ ಸ್ಕಾನಿಂಗ್ ಮಶೀನ್ ಖರೀದಿಸಬೇಕು. ಸಂಸ್ಥೆಗೆ ಖಾಯಂ ವೈದ್ಯಕೀಯ ಅಧೀಕ್ಷಕ(ಮೆಡಿಕಲ್ ಸೂಪರಿಂಟೆಂಡೆಂಟ್)ರನ್ನು ಮೂರು ತಿಂಗಳಲ್ಲಿ ನೇಮಕ ಮಾಡಬೇಕು ಎಂದು 2020ರ ಮಾ.5ರಂದು ನ್ಯಾಯಾಲಯ ಆದೇಶ ನೀಡಿದೆ. ಆದರೆ, ಇಲ್ಲಿತನಕ ಎಂಆರ್‍ಐ ಮಶೀನ್ ಖರೀದಿಸಲಾಗಿಲ್ಲ, ವೈದ್ಯಕೀಯ ಅಧೀಕ್ಷಕರನ್ನು ನೇಮಕ ಮಾಡಲಾಗಿಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು. 

ಅಲ್ಲದೇ, ಉತ್ತರ ಕರ್ನಾಟಕ ಭಾಗದ ಜನರ ಪಾಲಿಗೆ ಡಿಮ್ಹಾನ್ಸ್ ಪ್ರಮುಖ ಆರೋಗ್ಯ ಸಂಸ್ಥೆಯಾಗಿದೆ. ಇದೊಂದು ಸರಕಾರ ನಡೆಸುವ ಸಂಸ್ಥೆಯಾಗಿದ್ದು, ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚ ಭರಿಸಲು ಸಾಧ್ಯವಾಗದ ಬಡವರು ಈ ಸಂಸ್ಥೆಗೆ ಬರುತ್ತಾರೆ. ಆದರೆ, ನ್ಯಾಯಾಲಯದ ಆದೇಶದ ಹೊರತಾಗಿಯೂ ಇಲ್ಲಿತನಕ ಎಂಆರ್‍ಐ ಮಶೀನ್ ಒದಗಿಸದ ಮತ್ತು ವೈದ್ಯಕೀಯ ಅಧೀಕ್ಷಕರನ್ನು ನೇಮಕ ಮಾಡದಿರುವುದು ದುರಾದೃಷ್ಟಕರ. ಹೀಗಾಗಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರನ್ನು ಖುದ್ದು ವಿಚಾರಣೆಗೆ ಹಾಜರಾಗಲು ನಿರ್ದೇಶನ ನೀಡುವುದು ಬಿಟ್ಟರೆ ನ್ಯಾಯಾಲಯಕ್ಕೆ ಬೇರೆ ವಿಧಿಯೇ ಇಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಹೀಗಾಗಿ, ಈ ಬಗ್ಗೆ ವಿವರಣೆ ನೀಡಲು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ವಿಚಾರಣೆಗೆ ಹಾಜರಾಗಬೇಕು ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.

ಇದಕ್ಕೂ ಮೊದಲು ಸರಕಾರದ ಪರ ವಕೀಲರು ವಾದ ಮಂಡಿಸಿ, ಸಂಸ್ಥೆಯ ಹಗಲು ಆರೈಕೆ (ಡೇ ಕೇರ್) ಕೇಂದ್ರಕ್ಕೆ ಸಿಬ್ಬಂದಿ ಒದಗಿಸಲಾಗಿದೆ. ಬಣ್ಣ ಹಚ್ಚುವ ಕೆಲಸ ಆಗಿದೆ. ಜೊತೆಗೆ ಕೆಲವೊಂದು ಮೂಲಕಸೌಕರ್ಯಗಳನ್ನು ಒದಗಿಸುವ ಕೆಲಸವೂ ಆಗಿದೆ. ಹಣಕಾಸಿನ ಕೊರತೆಯಿಂದಾಗಿ ಎಂಆರ್‍ಐ ಮಶೀನ್ ಖರೀದಿ ಸಾಧ್ಯವಾಗಿಲ್ಲ. ಇದಕ್ಕಾಗಿ ಮೂರು ತಿಂಗಳು ಕಾಲಾವಕಾಶ ಬೇಕು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News