ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ: ರಸ್ತೆಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆ
ಯಾದಗಿರಿ: ರವಿವಾರ ರಾತ್ರಿ ಸುರಪುರ ತಾಲೂಕಿನ ಚೌಡೇಶ್ವರಿ ಹಾಳ ಗ್ರಾಮದಲ್ಲಿ ಮಹಿಳೆಗೆ ದುಷ್ಕರ್ಮಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಖಂಡಿಸಿ ಸುರಪುರ ಮಾತ್ಮಗಾಂಧಿ ವೃತ್ತದ ಬಳಿ ರಸ್ತೆಯಲ್ಲಿ ಮಹಿಳೆಯ ಮೃತದೇಹ ಇಟ್ಟು ಪ್ರತಿಭಟನೆ.
ವಿವಿಧ ಸಂಘಟನೆಗಳ ಸಾವಿರಕ್ಕೂ ಹೆಚ್ಚು ಜನ ಪ್ರತಿಭಟನೆಯಲ್ಲಿ ಭಾಗವಹಿಸಿ ಪೊಲೀಸ್ ಇಲಾಖೆ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಹಿಳೆಯ ಮೇಲಿನ ಘೋರ ಕೃತ್ಯವನ್ನು ಖಂಡಿಸುತ್ತೇವೆ, ಪೊಲೀಸರ ಕಣ್ಣೊರೆಸುವ ತಂತ್ರದಂತೆ ಕೇವಲ ಒಬ್ಬರನ್ನು ಬಂಧಿಸಿದರೆ ಸಾಲದು ಪ್ರಕರಣಕ್ಕೆ ಸಂಬಂಧಿಸಿ ದೂರಿನಲ್ಲಿ ಹೆಸರಿಸಿದ ಎಲ್ಲಾ ಹತ್ತು ಜನರನ್ನು ಬಂಧಿಸಬೇಕೆಂದು ಪಟ್ಟುಹಿಡಿದಿದ್ದಾರೆ. ಎಲ್ಲರನ್ನೂ ಬಂಧಿಸುವ ವರೆಗೂ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಮಹಿಳೆ ಸಾವಿಗೆ ಪರಿಹಾರ ಧನವಾಗಿ 25 ಲಕ್ಷ ರೂಪಾಯಿಗಳ ಕೊಡಬೇಕು, 5 ಎಕರೆ ಜಮೀನು ನೀಡಬೇಕು, ಸರ್ಕಾರಿ ನೌಕರಿ ನೀಡಬೇಕು ಮತ್ತು ಆರೋಪಿಗೆ ಗಲ್ಲು ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಿದರು.ಅಲ್ಲದೆ ಮನವಿ ಸ್ವೀಕರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದರು.
ಸಂಜೆಯ ವೇಳೆಗೆ ಎಸ್ಪಿ ಸಿ.ಬಿ.ವೇದಮೂರ್ತಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಎಲ್ಲ ಬೇಡಿಕೆಗಳನ್ನು ಆಲಿಸಿ, ಶೀಘ್ರದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದರು ಹಾಗೂ ಇನ್ನುಳಿದ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮೂಲಕ ಸಲ್ಲಿಸಿದರು.
ಮಹಿಳೆಯ ಮೃತದೇಹ ಕಲಬುರ್ಗಿಯಿಂದ ಆಗಮಿಸುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ರಸ್ತೆ ಸಂಚಾರ ರದ್ದಾಗಿದ್ದು ವಾಹನ ದಟ್ಟಣೆಯುಂಟಾಗಿತ್ತು.ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ನೇತೃತ್ವದಲ್ಲಿ ಪಿಐ ಸುನೀಲ್ ಕುಮಾರ್ ಮೂಲಿಮನಿ ಇತರೆ ಅಧಿಕಾರಿಗಳು ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.
ಪ್ರತಿಭಟನೆಯಲ್ಲಿ ಮಾದಿಗ ದಂಡೋರ ಸಂಘಟನೆ ರಾಜ್ಯಾಧ್ಯಕ್ಷ ನರಸಪ್ಪ ರಾಯಚೂರು ಮಾದಿಗ ಯುವ ಸೇನೆ ರಾಜ್ಯಾಧ್ಯಕ್ಷ ನಂದಕುಮಾರ್ ಕನ್ನಳ್ಳಿ ಮುಖಂಡರಾದ ಡಿಎಸ್ಎಸ್ ಜಿಲ್ಲಾಧ್ಯಕ್ಷ ಹನುಮಂತ ಕಟ್ಟಿಮನಿ ಬೊಮ್ಮನಹಳ್ಳಿ ,ಮಾನಪ್ಪ ಹುಲಕಲ್,ದಾನಪ್ಪ ಕಡಿಮನಿ,ನಿಂಗಣ್ಣ ಗೋನಾಲ ಭೀಮಣ್ಣ ಮ್ಯಾಗೇರಿ, ಬಸವರಾಜ ಮುಷ್ಠಳ್ಳಿ,ಮಹೇಂದ್ರ ಕುಮಾರ್ ಬಿಲ್ಲವ್,ಮಲ್ಲು ಬಿಲ್ಲವ್,ನಾಗರಾಜ್ ವಡಗೇರಿ,ನಾಗರಾಜ್ ಓಕಳಿ, ಮಲ್ಲಿಕಾರ್ಜುನ ಸುಗೂರು, ಹಣಮಂತ ಬಿಲ್ಲವ್, ಭೀಮಣ್ಣ ಬಿಲ್ಲವ್, ಮಲ್ಲಿಕಾರ್ಜುನ ಬಿಲ್ಲವ್,ರಾಜು ದಿವಳಗುಡ್ಡ ಸೇರಿದಂತೆ ನೂರಾರು ಸಂಖ್ಯೆಯ ಮಹಿಳೆಯರು ಸೇರಿ ಸಾವಿರಾರು ಜನರಿದ್ದರು.