ಶೇ.99.74ರಷ್ಟು ಪಠ್ಯಪುಸ್ತಕಗಳ ಮುದ್ರಣ ಕಾರ್ಯ ಪೂರ್ಣ: ಹೈಕೋರ್ಟ್‍ಗೆ ಸರಕಾರದ ಹೇಳಿಕೆ

Update: 2021-10-05 17:29 GMT

ಬೆಂಗಳೂರು, ಅ.5: ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಪೂರೈಸಲು ಶೇ.99.74ರಷ್ಟು ಪಠ್ಯಪುಸ್ತಕಗಳ ಮುದ್ರಣ ಕಾರ್ಯ ಪೂರ್ಣಗೊಂಡಿದ್ದು, ಆ ಪುಸ್ತಕಗಳನ್ನು ಒದಗಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‍ಗೆ ತಿಳಿಸಿದೆ. 

ಈ ವಿಚಾರವಾಗಿ ಎ.ಎ.ಸಂಜೀವ್ ನಾರಾಯಣ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು. 

ಆಗ ಸರಕಾರಿ ವಕೀಲರು, ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ಸಲ್ಲಿಸಿರುವ ಮಾಹಿತಿಯಂತೆ, 2021-22ನೆ ಶೈಕ್ಷಣಿಕ ವರ್ಷಕ್ಕೆ ಪಠ್ಯಪುಸ್ತಕ ಮುದ್ರಣ ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ. ಈಗಾಗಲೇ ಒಂದರಿಂದ ಹತ್ತನೆ ತರಗತಿವರೆಗೆ ಶೇ.99.74ರಷ್ಟು ಪಠ್ಯಪುಸ್ತಕಗಳ ಮುದ್ರಣ ಕಾರ್ಯ ಪೂರ್ಣಗೊಂಡಿದೆ. ಆ ಪುಸ್ತಕಗಳನ್ನು ಶಾಲೆಗಳಿಗೆ ಪೂರೈಕೆ ಮಾಡುವ ಕೆಲಸವೂ ಭರದಿಂದ ಸಾಗಿದೆ. ಎರಡು ವಾರ ಕಾಲಾವಕಾಶ ನೀಡಿದರೆ ಎಲ್ಲ ವಿವರಗಳನ್ನು ನೀಡಲಾಗುವುದು ಎಂದರು.

ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಎರಡು ವಾರಗಳಲ್ಲಿ ಪಠ್ಯಪುಸ್ತಕ ಮುದ್ರಣ ಮತ್ತು ಪೂರೈಕೆ ಕಾರ್ಯ ಪೂರ್ಣಗೊಳಿಸಿ ಆ ಕುರಿತು ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಅ.23ಕ್ಕೆ ಮುಂದೂಡಿತು.

ಸರಕಾರ ಈ ಮೊದಲು ಸೆ.30ರೊಳಗೆ ಎಲ್ಲ ಶಾಲೆಗಳಿಗೆ ಶೇ.100ರಷ್ಟು ಪಠ್ಯಪುಸ್ತಕ ಒದಗಿಸುವ ಕಾರ್ಯವನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿತ್ತು.

ಕಳೆದ ವಿಚಾರಣೆ ವೇಳೆ ನ್ಯಾಯಪೀಠ ಪಠ್ಯಪುಸ್ತಕಗಳನ್ನು ಪೂರೈಕೆ ಮಾಡದೆ ಶಾಲೆಗಳನ್ನು ಪುನಾರಂಭಿಸುತ್ತಿರುವುದು ಅರ್ಥಹೀನ ಎಂದು ಕರೆದಿರುವ ಹೈಕೋರ್ಟ್, ಪಠ್ಯಪುಸ್ತಕಗಳ ಪೂರೈಕೆ ವಸ್ತುಸ್ಥಿತಿ ಕುರಿತು ವರದಿ ಸಲ್ಲಿಸಲು ಸರಕಾರಕ್ಕೆ ಆದೇಶಿಸಿತ್ತು.

ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮತ್ತು ನೋಟ್ ಪುಸ್ತಕ ಅತ್ಯಗತ್ಯ. ಶಾಲೆಗಳನ್ನು ಆರಂಭಿಸುವ ಮುನ್ನವೇ ಪಠ್ಯಪುಸ್ತಕಗಳನ್ನು ಒದಗಿಸಬೇಕಿತ್ತು. ಪಠ್ಯಪುಸ್ತಕಗಳನ್ನು ಒದಗಿಸದೆ ಮಕ್ಕಳನ್ನು ತರಗತಿಗೆ ಹಾಜರಾಗಿ ಎಂದು ಹೇಳುವುದು ಅರ್ಥಹೀನವಾಗುತ್ತದೆ. ಪಠ್ಯ ಒದಗಿಸದೆ ಶಾಲೆ ಆರಂಭಿಸುವುದು ಸರಿಯಲ್ಲ ಎಂದು ಹೇಳಿತು.

ಆನ್‍ಲೈನ್ ಶಿಕ್ಷಣ ಪದ್ಧತಿ ನಡೆಯುತ್ತಿರುವುದರಿಂದ ಸೌಲಭ್ಯವಿಲ್ಲದ ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಎಲೆಕ್ಟ್ರಾನಿಕ್ ಸಾಧನಗಳನ್ನು ಪೂರೈಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು. ಆದರೆ, ಈಗಾಗಲೇ ಶಾಲೆಗಳು ಪ್ರಾರಂಭಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿರುವುದರಿಂದ ಈ ನಿಟ್ಟಿನಲ್ಲಿ ಈ ಹಂತದಲ್ಲಿ ಯಾವುದೇ ನಿರ್ದೇಶನ ನೀಡುವುದಿಲ್ಲ ಎಂದು ನ್ಯಾಯಪೀಠವು ತಿಳಿಸಿತ್ತು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News