ಕುಮಾರಸ್ವಾಮಿ ಅವರು ನಾಲ್ಕು ದಿನ ಸಂಘದ ಶಾಖೆಗೆ ಬರಲಿ: ನಳಿನ್ ಕುಮಾರ್ ಕಟೀಲ್ ಆಹ್ವಾನ

Update: 2021-10-06 13:37 GMT
 ನಳಿನ್ ಕುಮಾರ್ ಕಟೀಲ್

 ಶಿವಮೊಗ್ಗ, ಅ.06: ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಆರೆಸ್ಸೆಸ್ ಶಾಖೆಗೆ ಬರುವಂತೆ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಹ್ವಾನಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಆರೆಸ್ಸೆಸ್ ಬಗ್ಗೆ ತಿಳಿದಿಲ್ಲ. ಸಂಘ ಇಡೀ ದೇಶದಲ್ಲಿ ರಾಷ್ಟ್ರಭಕ್ತಿ ಉದ್ಧೀಪನ ಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯನ್ನು ರಾಷ್ಟ್ರದೃಷ್ಟಾನವನ್ನಾಗಿಸಲು ಶಿಕ್ಷಣ ಕೊಡುತ್ತದೆ. ಕಾಮಾಲೆ ರೋಗದವರಿಗೆ ಊರೆಲ್ಲ ಹಳದಿ ಕಾಣೋ ಹಾಗೆ ಆಗಿದೆ ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ನಾಲ್ಕು ದಿನ ಶಾಖೆಗೆ ಬರಲಿ, ಆಮೇಲೆ ಸಂಘದ ಬಗ್ಗೆ ಟೀಕೆ ಮಾಡಲಿ. ಅವರು ಅಧಿಕಾರದಲ್ಲಿದ್ದಾಗ ಅವರ ಕುಟುಂಬದವರಿಗೆ ಸಹಾಯ ಮಾಡಿಕೊಂಡು ಬಂದವರು. ಅವರಿಗೆ ರಾಷ್ಟ್ರಭಕ್ತಿ, ದೇಶದ ಪರಿಕಲ್ಪನೆ, ಚಿಂತನೆಗಳಿಲ್ಲ. ಪಾರ್ಟಿಯನ್ನೇ ಕುಟುಂಬ ರಾಜಕಾರಣಕ್ಕೆ ತಂದವರು, ಅವರಿಗೆ ಆರೆಸ್ಸೆಸ್ ವಿಚಾರಧಾರೆಗಳೇನು ಅಂತ ತಿಳಿದಿಲ್ಲ. ಸಂಘ ಇಂದು ಸಂಸ್ಕಾರ, ದೇಶಭಕ್ತಿ ಸಾರುವ ಕೆಲಸ ಮಾಡುತ್ತಿದೆ ಎಂದು ಕಟೀಲ್ ಹೇಳಿದರು.

ಸಂಘ ಅಧಿಕಾರಿಗಳನ್ನು ನಿರ್ಮಿಸುತ್ತಿಲ್ಲ:

ಸಂಘ ವ್ಯಕ್ತಿ ನಿರ್ಮಾಣದ ಮೂಲಕ ದೇಶ ಕಟ್ಟುವ ಕೆಲಸ ಮಾಡುತ್ತಿದೆ. ಇವತ್ತು ರಾಷ್ಟ್ರಪತಿ, ಪ್ರಧಾನಮಂತ್ರಿ ಇಬ್ಬರೂ ಸ್ವಯಂಸೇವಕರೇ. ಜನತಾದಳದಲ್ಲೂ ಸ್ವಯಂಸೇವಕರಿದ್ದಾರೆ. ಕಾಂಗ್ರೆಸ್‌ನಲ್ಲೂ ಸಹ ಸ್ವಯಂ ಸೇವಕರಿದ್ದಾರೆ. ಇಂದು ಸಂಘ ಪ್ರವೇಶ ಮಾಡದ ಜಾಗವಿಲ್ಲ. ಅಧಿಕಾರಿಗಳನ್ನು ನಿರ್ಮಾಣ ಮಾಡಲು ಸಂಘ ಗುರಿ ಇಟ್ಟುಕೊಂಡಿಲ್ಲ, ಸಂಘ ರಾಷ್ಟ್ರ ನಿರ್ಮಾಣದ ಗುರಿಯನ್ನು ಇಟ್ಟುಕೊಂಡಿದೆ ಎಂದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News