×
Ad

'ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂಬುದು ಸರಿಯಲ್ಲ': ಸಿಎಂ ಬಸವರಾಜ ಬೊಮ್ಮಾಯಿ

Update: 2021-10-06 19:40 IST

ಮೈಸೂರು,ಅ.6: ಒಬ್ಬ ಮುಖ್ಯಮಂತ್ರಿಯಾದವನಿಗೆ ರಾಜ್ಯದ ಎಲ್ಲಾ ಜಿಲ್ಲೆಗಳು ಒಂದೇ ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂಬುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗುರುವಾರ ಮೈಸೂರು ದಸರಾ ಉದ್ಘಾಟನೆ ಮಾಡಲು ಬುಧವಾರ ವಿಶೇಷ ವಿಮಾನದಲ್ಲಿ ಬುಧವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಜ್ಯದ ಮುಖ್ಯಮಂತ್ರಿಯಾದವರಿಗೆ ಎಲ್ಲಾ ಜಿಲ್ಲೆಗಳು ಒಂದೇ, ನಂಜುಂಡಪ್ಪ ವರದಿ ಪ್ರಕಾರ ಚಾಮರಾಜನಗರ ಜಿಲ್ಲೆ ತೀರ ಹಿಂದುಳಿದ ಪ್ರದೇಶ, ಆ ಜಿಲ್ಲೆಗೆ ಭೇಟಿ ನೀಡಿ ವಿಶೇಷ ಅನುದಾನ ನೀಡುವುದು ಮುಖ್ಯಮಂತ್ರಿಗಳ ಕರ್ತವ್ಯ, ಹಾಗಾಗಿ ನಾನು ಚಾಮರಾಜನಗರ ಜಿಲ್ಲೆಗೆ ಹೋಗುತ್ತಿದ್ದೇನೆ. ಅಧಿಕಾರ ಹೋಗುತ್ತದೆ ಎಂಬುದು ಕೇವಲ ಭ್ರಮೆ ಎಂದು ಹೇಳಿದರು.

ನಮಗೆ ಅಧಿಕಾರ ಶಾಶ್ವತ ಅಲ್ಲ, ಹಾಗದರೆ ಚಾಮರಾಜನಗರ ಜಿಲ್ಲೆಗೆ ಹೋಗದ ಮುಖ್ಯಮಂತ್ರಿಗಳು ಶಾಶ್ವತವಾಗಿ ಅಧಿಕಾರದಲ್ಲಿ ಉಳಿದಿದ್ದಾರೆಯೇ ಎಂದು ಪ್ರಶ್ನಿಸಿದರು.

ನನಗೆ ಬೇರೆಯವರ ರೀತಿ ಯಾವುದೇ ಭಯ ಇಲ್ಲ, ಇದು ನಂಬಿಕೆ ಅಪನಂಬಿಕೆ ಪ್ರಶ್ನೆ ಅಲ್ಲ, ಇದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ, ಆ ಕರ್ತವ್ಯವನ್ನು ನಾನು ಈಗ ಮಾಡುತ್ತಿದ್ದೇನೆ. ನಾಳೆ ಮಾತ್ರ ಅಲ್ಲ ಇನ್ನೂ ಹಲವು ಬಾರಿಯೂ ನಾನು ಚಾಮರಾಜನಗರಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ರಸ್ತೆ ಗುಂಡಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಸ್ತೆಗಳ ಕಳಪೆ ಬಗ್ಗೆ ವರದಿ ತಯಾರಿಕೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇನೆ. ಯಾವ ಅವಧಿಯಲ್ಲಿ ರಸ್ತೆ ಆಗಿದೆ. ರಸ್ತೆ ಗುಣಮಟ್ಟದಿಂದ ಮಾಡಲಾಗಿದೆಯೋ ಇಲ್ಲವೊ ಎಂಬುದರ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ. ಕಳಪೆ ಕಾಮಗಾರಿಯಿಂದ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರೆ ಗುತ್ತಿಗೆದಾರನ ಮೇಲೆ ಕ್ರಮ ನಿಶ್ಚಿತ ಎಂದು ಹೇಳಿದರು.

ಮಳೆ ಬಂದಾಗ ಮಾತ್ರ ಈ ವಿಚಾರ ಚರ್ಚೆ ಮಾಡಿ ನಂತರ ಸುಮ್ಮನಾಗುವುದಿಲ್ಲ, ಈ ವಿಚಾರದಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮಳೆ ಬಂದಾಗ ನಿರಂತ ನೀರು ತುಂಬುವ ಪ್ರದೇಸ ಗುರುತು ಮಾಡಿ, ಅದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲಾಗುತ್ತದೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News