2023ರ ವಿಧಾನಸಭೆ ಚುನಾವಣೆ: ಅಲ್ಪಸಂಖ್ಯಾತರಿಗೆ 25ಕ್ಕೂ ಹೆಚ್ಚು ಕ್ಷೇತ್ರ ಮೀಸಲು; ಎಚ್.ಡಿ ಕುಮಾರಸ್ವಾಮಿ

Update: 2021-10-07 15:17 GMT

ಕಲಬುರಗಿ, ಅ. 7: ‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ 25ಕ್ಕಿಂತ ಹೆಚ್ಚು ವಿಧಾನಸಭೆ ಕ್ಷೇತ್ರಗಳಲ್ಲಿ ಟಿಕೆಟ್ ಮೀಸಲು ಇಡಲಾಗುವುದು' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ನಾನು ಬಿಡದಿಯಲ್ಲಿ ಏಳು ದಿನಗಳ ಕಾರ್ಯಾಗಾರ ನಡೆಸಿದ್ದೇನೆ. 2023ರ ಚುನಾವಣೆಗೆ ಮಿಷನ್-123 ಗುರಿಯೊಂದಿಗೆ ಈ ಚುನಾವಣೆಯಲ್ಲಿ ಇಬ್ಬರು ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೇನೆ. ಈ ಚುನಾವಣೆ ಜೆಡಿಎಸ್ ಪಾಲಿಗೆ 2023ರ ಹೋರಾಟಕ್ಕೆ ಇದು ಸೆಮಿಫೈನಲ್ ಎಂದು ತಿಳಿಸಿದರು.

ಯತ್ನಾಳ್‍ಗೆ ವಿಷಯ ಗೊತ್ತಿಲ್ಲ: ಆರೆಸ್ಸೆಸ್ ಬಗ್ಗೆ ತಾವು ನೀಡಿರುವ ಹೇಳಿಕೆ ಬಗ್ಗೆ ಬಿಜೆಪಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಟೀಕೆಗೆ ಉತ್ತರಿಸಿದ ಕುಮಾರಸ್ವಾಮಿ, ‘ನನ್ನ ಹೇಳಿಕೆಯನ್ನು ಯತ್ನಾಳ್ ಅವರು ಸರಿಯಾಗಿ ಅರ್ಥೈಸಿಕೊಂಡಿಲ್ಲ. ನಾನು ಓದಿದ ಪುಸ್ತಕದಲ್ಲಿ ಸಂತೋಷ ತನೇಜಾ ಎಂಬ ಪ್ರಚಾರಕ ಹೇಳಿರುವಂತೆ, 4 ಸಾವಿರಕ್ಕೂ ಹೆಚ್ಚು ನಾಗರಿಕ ಸೇವಾ ಅಧಿಕಾರಿಗಳನ್ನು ವಿವಿಧ ಹಂತಗಳಲ್ಲಿ ನಾವು ತರಬೇತಿ ಕೊಟ್ಟು ತುಂಬಿದ್ದೇವೆ. ಪ್ರಧಾನಿ ಮೋದಿ ಅವರು ಆಡಳಿತದ ಅಧಿಕಾರಗಳನ್ನು ಜನರಿಂದ ಆಯ್ಕೆಯಾದ ಮಂತ್ರಿಗಳಿಗೆ ನೀಡದೇ ಅಧಿಕಾರಿಗಳಿಗೆ ನೀಡಿದ್ದಾರೆ. ಅವರ ಹೇಳಿಕೆಯನ್ನೇ ಲೇಖಕರು ಪುಸ್ತಕದಲ್ಲಿ ಬರೆದಿದ್ದಾರೆ. ಅದನ್ನೇ ನಾನು ಓದಿ ಹೇಳಿದ್ದೇನೆ. ಎರಡು ದಿನಗಳಿಂದ ನನ್ನ ಮೇಲೆ ಮುಗಿಬಿದ್ದಿರುವ ನಾಯಕರು ಇದನ್ನು ಅರಿತುಕೊಳ್ಳಬೇಕು' ಎಂದು ತಿರುಗೇಟು ನೀಡಿದರು.

‘ಮಂತ್ರಿಗಳಿಗೆ ಅಧಿಕಾರ ಇಲ್ಲ ಎಂದಾದ ಮೇಲೆ ಪ್ರಜಾಪ್ರಭುತ್ವ ಏಕೆ ಬೇಕು? ಚುನಾವಣೆ ಏಕೆ ಬೇಕು. ಅಧಿಕಾರಿಗಳ ಮೂಲಕವೇ ಸರಕಾರ ನಡೆಸಬಹುದಲ್ಲ. ಇದು ಸಂವಿಧಾನದ ಮತ್ತು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದ ನಡೆ. ಅದರ ವಿರುದ್ಧವೇ ನಾನು ದನಿಯೆತ್ತಿದ್ದೇನೆ. ಗೌಡರ ಕುಟುಂಬ ರಾಜಕಾರಣವನ್ನು ಫ್ಯಾಮಿಲಿ ಬಿಸಿನೆಸ್ ಮಾಡಿಕೊಂಡಿದೆ ಎಂದು ಕಟೀಲ್ ಹೇಳಿಕೆ ಸರಿಯಲ್ಲ. ನಾವು ದುಡ್ಡು ಹೊಡೆಯೋಕೆ ರಾಜಕಾರಣ ಮಾಡುತ್ತಿಲ್ಲ. ಜನರ ಸೇವೆ ಮಾಡಲು ಮಾಡುತ್ತಿದ್ದೇವೆ. ಯತ್ನಾಳ್ ಅವರು ಯಡಿಯೂರಪ್ಪ ಸಿಎಂ ಆಗಿದ್ದಾಗ ಏನೆಲ್ಲ ಹೇಳಿದ್ದರು ಅನ್ನುವುದು ಗೊತ್ತಲ್ಲವೆ ನಿಮಗೆ. ನಾವು ಹಿಂಬಾಗಿಲಿನಿಂದ ರಾಜಕೀಯ ಪ್ರವೇಶ ಮಾಡುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿದ್ದೇವೆ, ಗೆದ್ದಿದ್ದೇವೆ, ಸೋತಿದ್ದೇವೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎರಡು ಕ್ಷೇತ್ರಗಳ ಉಪ ಚುನಾವಣೆ ವೇಳೆಯಲ್ಲಿ ಐಟಿ ದಾಳಿ ನಡೆದಿದೆ. ಬಹುಶಃ ತಮಗೆ ಸಿಕ್ಕಿರುವ ಮಾಹಿತಿ ಆಧಾರದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರಬಹುದೇನೋ. ಯಡಿಯೂರಪ್ಪ ಎರಡು ವರ್ಷ ಸಿಎಂ ಆಗಿದ್ದಾಗ ಅವರ ಪುತ್ರನ ಜತೆ ಕೆಲಸ ಮಾಡಿದ್ದ ಆಪ್ತನ ಮನೆ ಮೇಲೆ ದಾಳಿ ಆಗಿರುವುದು ಎಲ್ಲೋ ಒಂದು ಕಡೆ ಬಿಜೆಪಿ ಆಂತರಿಕ ವಿಷಯಗಳಿಗೆ ಸಂಬಂಧಪಟ್ಟಿರಬಹುದು. ಅವರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ನಡೆದಿರುವ ದಾಳಿ ಇದಾಗಿರಲೂಬಹುದು'

-ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News