ದತ್ತಪೀಠ ವಿವಾದ ಸಂಬಂಧ ಆಕ್ಷೇಪಣೆ ಸಲ್ಲಿಕೆಗೆ ಶೀಘ್ರ ಪ್ರಕಟನೆ: ಸಚಿವ ಮಾಧುಸ್ವಾಮಿ
ಚಿಕ್ಕಮಗಳೂರು, ಅ.8: ಹಲವಾರು ವರ್ಷಗಳಿಂದ ಬಗೆಹರಿಯದೇ ಉಳಿದಿರುವ ದತ್ತಪೀಠದ ಸಮಸ್ಯೆಯನ್ನು ರಾಜ್ಯ ಸರಕಾರ ಶೀರ್ಘದಲ್ಲೇ ಬಗೆಹರಿಸಬೇಕೆಂಬ ಮಹದಾಸೆ ಹೊಂದಿದೆ. ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಸರಕಾರ ಉಪಸಮಿತಿಯನ್ನು ರಚನೆ ಮಾಡಿದ್ದು, ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರವಾರಿ ಇಲಾಖೆ ಸಚಿವ ಮಾಧುಸ್ವಾಮಿ ತಿಳಿಸಿದರು.
ಖಾಸಗಿ ಕಾರ್ಯಕ್ರಮದ ಅಂಗವಾಗಿ ನಗರಕ್ಕೆ ಆಗಮಿಸಿದ್ದ ವೇಳೆ ನಗರದ ಪ್ರವಾಸಿ ಮಂದಿರದಲ್ಲಿ ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಇಂಜಿನಿಯರ್‍ಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಕಾರ್ಯಕ್ರಮದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದತ್ತಪೀಠ ವಿವಾದ ಸಂಬಂಧ ಹೈಕೋರ್ಟ್ ಆದೇಶದ ಮೇರೆಗೆ ರಾಜ್ಯ ಸರಕಾರ ಈಗಾಗಲೇ ಸಚಿವ ಸಂಪುಟದ ಉಪಸಮಿತಿಗೆ ಮೂವರನ್ನು ನೇಮಕಮಾಡಿದ್ದು, ಈ ಸಮಸ್ಯೆಯ ಸಮಗ್ರ ಅಧ್ಯಯನ, ಪರಿಶೀಲನೆ ಬಳಿಕ ಈ ಸಂಬಂಧ ಸ್ಪಷ್ಟ ತೀರ್ಮಾನಕ್ಕೆ ಬರಲಿದೆ ಎಂದರು.
ತಾವು ಸೇರಿದಂತೆ ಮಜರಾಯಿ ಇಲಾಖೆಯ ಸಚಿವೆ ಶಶಿಕಲಾಜೊಲ್ಲೆ, ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್.ಅಂಗಾರ ಅವರು ಸಚಿವ ಸಂಪುಟದ ಉಪ ಸಮಿತಿಯಲ್ಲಿದ್ದು, ನಾನೇ ಸಮಿತಿ ಅಧ್ಯಕ್ಷ ನಾಗಿದ್ದೇನೆ. ದತ್ತಪೀಠದ ವಿಷಯಕ್ಕೆ ಸಂಬಂಧಿಸಿದಂತೆ ಅ.5ಕ್ಕೆ ಅಧಿಕಾರಿಗಳೊಂದಿಗೆ ಮೊದಲ ಸಭೆ ನಡೆಸಲಾಗಿದೆ ಎಂದ ಅವರು, ದತ್ತಪೀಠ ವಿಷಯ ಕುರಿತಂತೆ ಸಾರ್ವಜನಿಕರು ಮತ್ತು ಸಂಬಂಧಿಸಿದ ವ್ಯಕ್ತಿಗಳಿಂದ ಅಹವಾಲು ಆಲಿಸಲಾಗುತ್ತಿದ್ದು, ದಾಖಲೆ ಸಮೇತ ಅಭಿಪ್ರಾಯವನ್ನು ಮಂಡಿಸಲು 20ರಿಂದ 1 ತಿಂಗಳವರೆಗೆ ಕಾಲಾವಕಾಶ ನೀಡಲಾಗುವುದು. ಈ ಸಂಬಂಧ ಪತ್ರಿಕಾ ಪ್ರಕಟನೆಯನ್ನೂ ಹೊರಡಿಸಲಾಗುವುದು ಎಂದರು.
ಆಸಕ್ತರು ದತ್ತಪೀಠವಿಷಯಕ್ಕೆ ಸಂಬಂಧಿಸಿದಂತೆ ದಾಖಲೆ ಸಮೇತ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸ್ವೀಕರಿಸುವ ಅರ್ಜಿಗಳು ಅಧಿಕ ಸಂಖೆಯಲ್ಲಿದ್ದರೇ ಚಿಕ್ಕಮಗಳೂರಿನಲ್ಲೇ ಸಭೆ ಕರೆಯಲಾಗುವುದು. ಹೆಚ್ಚಿನ ಜನರು ಅರ್ಜಿ ಸಲ್ಲಿಸದಿದ್ದಲ್ಲಿ ಬೆಂಗಳೂರಿನಲ್ಲೇ ಸಭೆ ಆಯೋಜಿಸಲಾಗುವುದು. ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕೊಡಲೇಬೇಕಾಗಿರುವುದರಿಂದ ತಿಂಗಳ ಕಾಲಾವಕಾಶ ನೀಡಲಾಗುವುದು, ದತ್ತಪೀಠ ವಿಷಯ ಕುರಿತಂತೆ ತೀರ್ಮಾನ ಕೈಗೊಳ್ಳಲು ಉಚ್ಚ ನ್ಯಾಯಾಲಯ ಸರಕಾರಕ್ಕೆ ಈಗಾಗಲೇ ಸೂಚನೆ ನೀಡಿದ್ದು, ಆದಷ್ಟು ಬೇಗ ತೀರ್ಮಾನಕೈಗೊಂಡು ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದರು.
ಈ ವೇಳೆ ಶಾಸಕ ಸಿ.ಟಿ.ರವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ದತ್ತಪೀಠ ವಿವಾದ ಸಂಬಂಧ ಹೈಕೋರ್ಟ್ ಸೂಚನೆ ಮೇರೆಗೆ ರಾಜ್ಯ ಸರಕಾರ ಉಪಸಮಿತಿಯನ್ನು ರಚಿಸಿದ್ದು, ಈ ಸಮಿತಿಯಲ್ಲಿ ಸಚಿವ ವಿ.ಸುನಿಲ್‍ಕುಮಾರ್ ಇಲ್ಲ. ಸುನಿಲ್‍ಕುಮಾರ್ ಇದ್ದಾರೆಂದು ನಾನು ಹಿಂದೆ ಹೇಳಿದ್ದೆ. ಆದರೆ ಸಿಎಂ ಅವರು ಉಪಸಮಿತಿಗೆ ಸುನಿಲ್‍ಕುಮಾರ್ ಅವರನ್ನು ನೇಮಕ ಮಾಡಿಲ್ಲ, ಎಂದು ತಿಳಿಸಿದ್ದಾರೆ. ಸಮಿತಿಯಲ್ಲಿ ನಾನೂ ಸೇರಿದಂತೆ ಶಶಿಕಲಾ ಜೊಲ್ಲೆ ಹಾಗೂ ಎಸ್.ಎಂಗಾರ ಮಾತ್ರ ಇದ್ದು, ಮೂರು ಮಂದಿಯ ಸಮಿತಿ ಇದಾಗಿದೆ ಎಂದು ಇದೇ ವೇಳೆ ಮಾಧುಸ್ವಾಮಿ ಸ್ಪಷ್ಟನೆ ನೀಡಿದರು.