×
Ad

ನಬಾರ್ಡ್ ಯೋಜನೆಗಳಿಗೆ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರಕ್ಕೆ ಮನವಿ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-10-08 20:29 IST

ಹೊಸದಿಲ್ಲಿ, ಅ.8: ನಬಾರ್ಡ್ ಯೋಜನೆಗಳಿಗೆ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಎಸ್‍ಟಿಗೆ ಸಂಬಂಧಿಸಿದ ಸಚಿವರ ಸಮಿತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ನಬಾರ್ಡ್ ಯೋಜನೆಗಳಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಲು ಸುದೀರ್ಘ ಚರ್ಚೆಯಾಯಿತು. ಮೂಲಭೂತಸೌಕರ್ಯ ಅಭಿವೃದ್ಧಿಗೆ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿಗೆ ಅನುದಾನ ನೀಡಲು ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನಬಾರ್ಡ್ ಮತ್ತು ಎಸ್‍ಐಡಿಬಿಐಯ ಕರ್ನಾಟಕದ ಯೋಜನೆಗಳ ಬಗ್ಗೆ ನವೆಂಬರ್ ಮೊದಲನೆ ವಾರದಲ್ಲಿ ನಡೆಯುವ ಸಭೆಯಲ್ಲಿ ಕೇಂದ್ರ ವಿತ್ತ ಸಚಿವರು ಈ ಬಗ್ಗೆ ಸೂಕ್ತ ನಿರ್ದೇಶನ ನೀಡಲಿದ್ದಾರೆ. ಎಸ್‍ಐಡಿಬಿಐಯಿಂದ ಸಣ್ಣ ಕೈಗಾರಿಕೆಗೆ ಹಾಗೂ ಮೈಕ್ರೋ ಫೈನಾನ್ಸ್ ಯೋಜನೆಗಳ ಅನು ಷ್ಠಾನಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಜಿಎಸ್‍ಟಿ ಸಚಿವರ ಸಮಿತಿಯ ರಚನೆ, ಜವಾಬ್ದಾರಿ, ಕಾರ್ಯಚಟುವಟಿಕೆಗಳ ಬಗ್ಗೆ ಕೇಂದ್ರ ವಿತ್ತ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಸಮಿತಿಯ ಪ್ರಥಮ ಸಭೆಯನ್ನು ಸಧ್ಯದಲ್ಲಿಯೇ ಕೈಗೊಳ್ಳಲಿದ್ದೇನೆ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜ್ಯಕ್ಕೆ ಜಿಎಸ್‍ಟಿಯ ಪರಿಹಾರ ಮೊತ್ತ 12,000 ಕೋಟಿ ರೂ. ದೊರಕಿದ್ದು, ಮಾರ್ಚ್ 2021 ರವರೆಗಿನ 11,800 ಕೋಟಿ ರೂ.ಗಳ ಪರಿಹಾರ ಮೊತ್ತವನ್ನು ಕಂತಿನಲ್ಲಿ ಕೊಡಲು ಪ್ರಾರಂಭಿಸಿದ್ದಾರೆ. ಈ ವರ್ಷ 18,000 ಕೋಟಿ ರೂ. ಕೇಂದ್ರ ಸರಕಾರ ನೀಡುತ್ತಿದೆ. ಈ ವರ್ಷ ಜಿಎಸ್‍ಟಿ ಸಂಗ್ರಹ ಸುಧಾರಣೆ ಕಂಡಿರುವುದರಿಂದ ರಾಜ್ಯಕ್ಕೆ ಜಿಎಸ್‍ಟಿ ಪರಿಹಾರ ಹೆಚ್ಚಿಗೆ ದೊರೆಯಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News