ರಾಷ್ಟ್ರಪತಿ ಭೇಟಿ ಹಿನ್ನೆಲೆ: ದನಕರುಗಳಿಗೆ ಆಹಾರ ನೀಡದೆ ಕೂಡಿ ಹಾಕಿದ ಶೃಂಗೇರಿ ಪ.ಪಂ ವಿರುದ್ಧ ಸಾರ್ವಜನಿಕರ ಆಕ್ರೋಶ

Update: 2021-10-08 16:45 GMT

ಚಿಕ್ಕಮಗಳೂರು, ಅ.8: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ ಹಿನ್ನೆಲೆಯಲ್ಲಿ ಶೃಂಗೇರಿ ಪಟ್ಟಣ ಪಂಚಾಯತ್ ಪಟ್ಟಣದಲ್ಲಿದ್ದ ಬೀಡಾಡಿ ಜಾನುವರು ಹಾಗೂ ಬೀದಿ ನಾಯಿಗಳನ್ನು ಹಿಡಿದು ಪಟ್ಟಣದ ಹೊರವಲಯಕ್ಕೆ ಬಿಟ್ಟಿದ್ದು, ಈ ಕ್ರಮದ ವಿರುದ್ಧ ರೈತರು, ಶ್ವಾನಪ್ರೇಮಿಗಳು ಹಾಗೂ ಸಾರ್ವಜನಿಕರು ಪಪಂ ವಿರುದ್ಧ ವ್ಯಾಪಕ ಆಕ್ರೋಶ ವ್ಯಕಪಡಿಸಿದ್ದಾರೆ.

ಅ.8ರಂದು ಶೃಂಗೇರಿ ಪಟ್ಟಣಕ್ಕೆ ರಾಷ್ಟ್ರಪತಿ ಶೃಂಗೇರಿ ದೇವಾಲಯಕ್ಕೆ ಆಗಮಿಸಲಿದ್ದ ಹಿನ್ನೆಲೆಯಲ್ಲಿ ಶೃಂಗೇರಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿದ್ದ ಎಲ್ಲ ಬೀದಿ ನಾಯಿಗಳನ್ನು ಹಿಡಿದು ಪಟ್ಟಣದ ಹೊರ ವಲಯದಲ್ಲಿ ಬಿಡಲಾಗಿತ್ತು. ಅಲ್ಲದೆ ನೂರಾರು ಜಾನುವಾರುಗಳನ್ನು ಹಿಡಿದಿದ್ದ ಪಟ್ಟಣ ಪಂಚಾಯತ್ ಎಲ್ಲ ಜಾನುವಾರುಗಳನ್ನು ಪಟ್ಟಣದ ಸಂತೆಕಟ್ಟೆಯಲ್ಲಿ ಬಿಟ್ಟಿದ್ದಾರೆ. ಹೀಗೆ ಬಿಟ್ಟಿರುವ ಜಾನುವಾರುಗಳಿಗೆ ತಿನ್ನಲು ಮೇವು, ಕುಡಿಯುವ ನೀರು ನೀಡಿಲ್ಲ ಎಂದು ಆರೋಪಿಸಿರುವ ಸಾರ್ವಜನಿಕರು ಕಳೆದ ಎರಡು ದಿನಗಳಿಂದ ಜಾನುವಾರುಗಳು ನೀರು, ಮೇವಿಲ್ಲದೇ ಸೊರಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶೃಂಗೇರಿ ದೇವಾಲಯಕ್ಕೆ ಈ ಹಿಂದೆಯೂ ಅನೇಕ ರಾಷ್ಟ್ರಪತಿಗಳು ಭೇಟಿ ನೀಡಿದ್ದರು. ಆದರೆ, ಹಿಂದೆಂದೂ ಮೂಕ ಪ್ರಾಣಿಗಳಿಗೆ ಈ ರೀತಿಯ ಶಿಕ್ಷೆ ನೀಡಿರಲಿಲ್ಲ. ಬೀದಿ ನಾಯಿಗಳನ್ನು ಹಿಡಿದು ಬೇರೆಡೆಗೆ ಬಿಟ್ಟಿರಲಿಲ್ಲ. ಆದರೆ ಈಗ ಮಾತ್ರ ಮೂಕ ಪ್ರಾಣಿಗನ್ನು ಹಿಡಿದು ಪಟ್ಟಣದಿಂದ ಹೊರ ಅಟ್ಟಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. 

''ಬಿಜೆಪಿಯವರು ಹಸುಗಳ ಮೇಲೆಯೇ ರಾಜಕೀಯ ಮಾಡುವವರು. ಹಸುಗಳ ರಕ್ಷಕರು ಎಂದು ಹೇಳುವ ಬಿಜೆಪಿ ಹಾಗೂ ಸಂಘಪರಿವಾರದ ನಕಲಿ ಗೋರಕ್ಷಕರು ಈಗೆಲ್ಲಿದ್ದಾರೆ. ಜಾನುವಾರುಗಳನ್ನು ಸಾಕಲು ಕೊಂಡೊಯ್ಯುವವರ ಮೇಲೆ ದಾಳಿ ಮಾಡಿ ಹಲ್ಲೆ ಮಾಡುವ ಸ್ವಯಂಘೋಷಿತ ಇಂತಹ ಗೋ ರಕ್ಷಕರು ಕಳೆದ ಎರಡು ದಿನಗಳಿಂದ ಜಾನುವಾರುಗಳು ಮೇವಿಲ್ಲದೇ ನರಳುತ್ತಿದ್ದರೂ ನಾಪತ್ತೆಯಾಗಿರುವುದು ಏಕೆ? ಎಂದು ಪ್ರಶ್ನಿಸಿದರುವ ಸಾರ್ವಜನಿಕರು ಬಿಜೆಪಿ ಹಾಗೂ ಸಂಘಪರಿವಾರದವರು ನಕಲಿ ಗೋ ರಕ್ಷಕರು ಎಂಬುದಕ್ಕೆ ಶೃಂಗೇರಿಯ ಸಂತೆಕಟ್ಟೆಯಲ್ಲಿ ಕೂಡಿ ಹಾಖಿರುವ ಈ ಗೋವುಗಳ ಪಾಡು ನೋಡಿದರೆ ಸ್ಪಷ್ಟವಾಗುತ್ತದೆ'' ಎಂದು ಸಾರ್ವಜನನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

''ರಾಷ್ಟ್ರಪತಿಗಳ ಕಾರಿಗೆ ಅಡ್ಡ ಬರಬಾರದೆಂದು ಸಂತೆಕಟ್ಟೆಯಲ್ಲಿ ಕೂಡಿಟ್ಟಿರುವ ಜಾನುವಾರುಗಳಲ್ಲಿ ಕೆಲ ಹಸುಗಳು ಗರ್ಭಧರಿಸಿದ್ದು, ಅವುಗಳಿಗೂ ನೀರು, ಆಹಾರ ನೀಡಿಲ್ಲ. ಎರಡು ದಿನಗಳಿಂದ ಈ ಹಸುಗಳನ್ನು ಉಪವಾಸ ಕೆಡವಲಾಗಿದ್ದು, ಶುಕ್ರವಾರ ಸಂಜೆ ರಾಷ್ಟ್ರಪತಿ ಹಿಂದುರುಗಿದ ಬಳಿಕ ಈ ಜಾನುವಾರುಗಳನ್ನು ಬಿಡಲಾಗಿದೆ. ಎರಡು ದಿನಗಳ ಕಾಲ ಮೂಕ ಪ್ರಾಣಿಗಳಿಗೆ ಅನ್ನಾಹಾರ ನೀಡದೇ ಹಿಂಸೆ ನೀಡಿದ ಪಟ್ಟಣ ಪಂಚಾಯತ್ ಅಧಿಕಾರಿಗಳು, ಸದಸ್ಯರು ಹಾಗೂ ನಕಲಿ ಗೋರಕ್ಷಕರು, ಬಿಜೆಪಿಯವರು ಎಂತಹ ನಿರ್ಧಯಿಗಳು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಹಸುಗಳು ಬಿಜೆಪಿಯವರಿಗೆ ರಾಜಕೀಯ ಮಾಡಲು ಬೇಕಾಗಿರುವ ಒಂದು ವಸ್ತು ಮಾತ್ರ ಎಂದು'' ಸಾರ್ವಜನಿಕರು ದೂರಿದ್ದಾರೆ.

ರಾಜ್ಯ ಸರಕಾರದ ಅಧಿಕಾರಿಗಳು, ಜನಪ್ರತನಿಧಿಗಳು ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಬೀದಿನಾಯಿಗಳನ್ನು ಹಿಡಿದು ಪಟ್ಟಣದ ಹೊರಗೆ ಬಿಟ್ಟು ಬಂದಿದ್ದಾರೆ. ಪಟ್ಟಣದಲ್ಲಿ ಯಾರಿಗೂ ತೊಂದರೆ ನೀಡದೇ ತಿರುಗಾಡಿಕೊಂಡಿದ್ದ ದನಕರುಗಳನ್ನು ಹಿಡಿದು ಪಟ್ಟಣದ ಸಂತೆಕಟ್ಟೆ ಎಂಬಲ್ಲಿ ಕೂಡಿ ಹಾಕಲಾಗಿದೆ. ಕಳೆದ ಎರಡು ದಿನಗಳಿಂದ ಈ ಜಾನುವಾರುಗಳು ನೀರು, ಮೇಲವಿಲ್ಲದೇ ಉಪವಾಸದಿಂದ ನರಳಾಡುತ್ತಿದ್ದರೂ ಅಧಿಕಾರಿಗಳು, ಜನಪ್ರತನಿಧಿಗಳು ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಕೊನೆ ಪಕ್ಷ ಗೋರಕ್ಷಕರಾದರೂ ಬಂದು ಉಪವಾಸವಿದ್ದ ಜಾನುವಾರುಗಳಿಗೆ ಮೇವು ನೀಡಬಹುದಿತ್ತು. ಆದರೆ ಗೋವುಗಳ ರಕ್ಷಣೆಗೆ ಈಗ ಯಾರೂ ಬಂದಿಲ್ಲ. ಎಲ್ಲರೂ ನಕಲಿ ಗೋರಕ್ಷರೆಂಬುದು ಈ ಘಟನೆ ಸಾಕ್ಷಿಯಾಗಿದೆ.

- ನವೀನ್ ಕುರುವಾನೆ, ಹಸಿರುಸೇನೆ, ತಾಲೂಕು ಅಧ್ಯಕ್ಷ ಕೊಪ್ಪ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News