''ಉತ್ತಮ ಆಡಳಿತ ನೀಡಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ'': ಮುಖ್ಯಮಂತ್ರಿ ಬೊಮ್ಮಾಯಿ

Update: 2021-10-08 16:22 GMT

ಹೊಸದಿಲ್ಲಿ, ಅ.8: ಭಾರತೀಯ ಜನತಾಪಕ್ಷ ಈಗ ಕರ್ನಾಟಕದಲ್ಲಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅದು ಸಮಾಜದ ಎಲ್ಲ ವರ್ಗದವರಿಗೂ ತಲುಪಿ ಅವರ ಬೆಂಬಲವನ್ನು ಗಳಿಸಿರುವ ಪಕ್ಷವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ಶುಕ್ರವಾರ ಹೊಸದಿಲ್ಲಿಯಲ್ಲಿ ನಡೆದ ಇಂಡಿಯಾ ಟುಡೇ ಕಾನ್ಕಲೇವ್ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಿಂದ ಹಲವಾರು ಜನ ಲಿಂಗಾಯತ ಸಮುದಾಯದವರು ಬಿಜೆಪಿ ಪಕ್ಷದಿಂದ ಶಾಸಕರು ಮತ್ತು ಸಂಸದರಾಗಿದ್ದಾರೆ. ಆದರೆ ಒಂದು ಸರಕಾರ ಅಧಿಕಾರಕ್ಕೆ ಬರಬೇಕೆಂದರೆ ಎಸ್ಸಿ, ಎಸ್ಟಿ, ಒಕ್ಕಲಿಗ, ಹಿಂದುಳಿದ ವರ್ಗದವರ ಬೆಂಬಲಬೇಕು. ಈ ವರ್ಗದವರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹೀಗಾಗಿ ಬಿಜೆಪಿ ಈಗ ಕರ್ನಾಟಕದಲ್ಲಿ ಸಮಾಜದ ಎಲ್ಲ ವರ್ಗದವರ ಪಕ್ಷವಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು, ಅವರು ಮುಂದಿನ ಜನಾಂಗಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರೊಬ್ಬ ಪ್ರಬಲ ನಾಯಕ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. 

ನನ್ನ ನೇತೃತ್ವದಲ್ಲಿ ಚುನಾವಣೆ: 2023 ಚುನಾವಣೆ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಮಾರ್ಗದರ್ಶನದಲ್ಲಿ ನನ್ನ ನೇತೃತ್ವಲ್ಲಿ ನಡೆಯಲಿದೆ. ಎಷ್ಟು ಅವಧಿಗೆ ಮುಖ್ಯಮಂತ್ರಿಯಾಗಿರುತ್ತೇನೆ ಎಂಬುದು ಮುಖ್ಯವಲ್ಲ. ಈ ಅವಧಿಯಲ್ಲಿ ಏನು ಮಾಡುತ್ತೇನೆ ಎಂಬುದು ಮುಖ್ಯ. ಸಿಕ್ಕಿರುವ ಈ ಅವಧಿಯಲ್ಲಿ ಉತ್ತಮ ಆಡಳಿತ ನೀಡುವುದರ ಜೊತೆಗೆ ಮತ್ತೊಂದು ಅವಧಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

ನೀಟ್ ಪರೀಕ್ಷೆಗೆ ವಿರೋಧ ಬೇಡ

ನೀಟ್ ಪರೀಕ್ಷೆಗೆ ತಮಿಳುನಾಡು ಸರಕಾರ ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದು ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News